ಬೆಂಗಳೂರು: ರಾಜ್ಯದ 16-17 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಬಿಜೆಪಿ ಪರ ಸ್ಪಷ್ಟವಾದ ಅಲೆ ಇದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2 ತಿಂಗಳ ಮೊದಲು ಮುಖ್ಯಮಂತ್ರಿ ವಿಚಾರದಲ್ಲಿ ಖರ್ಗೆ, ದಲಿತ ನಾಯಕರ ಹೆಸರು ಪ್ರಸ್ತಾಪ ಆಗುತ್ತಿರಲಿಲ್ಲ. ದಲಿತ ಪದ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದಕ್ಕೆ ಹತಾಶೆಯೇ ಕಾರಣ.
ಛತ್ತೀಸಗಡದಲ್ಲಿ ಕಾಂಗ್ರೆಸ್ಸಿನ ಪ್ರಮುಖ ನಾಯಕನ ಮನೆ ಮೇಲೆ ಐಟಿ ದಾಳಿ ನಡೆದಾಗ 2 ಸಾವಿರ ಕೋಟಿ ಹಣ ಸಿಕ್ಕಿದ್ದು, ರಮೇಶ್‍ಕುಮಾರ್ ಅವರ ಮೂರು ತಲೆಮಾರಿಗೆ ಆಗುವಷ್ಟು ಹಣ ಇದೆ ಎಂದಿರುವುದು ಕಾಂಗ್ರೆಸ್ಸಿನ ಭ್ರಷ್ಟತೆಗೆ ಸ್ಪಷ್ಟ ಸಾಕ್ಷಿ. ಲೂಟಿಗಾಗಿ ಅಧಿಕಾರಕ್ಕೆ ಬರುವುದು, ದೆಹಲಿಗೆ ಸೂಟ್‍ಕೇಸ್ ಕಳುಹಿಸಿಕೊಡಲು ಕಾಂಗ್ರೆಸ್ ಪಕ್ಷ ಅಧಿಕಾರ ಬಯಸುತ್ತಿದೆ ಎಂದು ಟೀಕಿಸಿದರು.
ಕೇಂದ್ರ ಸಚಿವ ಎಲ್.ಮುರುಗನ್ ಮಾತನಾಡಿ, ಮೀಸಲಾತಿಯು ತಳಮಟ್ಟದ ಸಮಾಜಕ್ಕೆ ತಲುಪಬೇಕೆಂಬುದು ದೀನದಯಾಳ ಉಪಾಧ್ಯಾಯರ ಆಶಯವಾಗಿತ್ತು. ಅದರ ನಿಟ್ಟಿನಲ್ಲಿ ಬೊಮ್ಮಾಯಿಯವರ ಸರಕಾರವು ಒಳ ಮೀಸಲಾತಿ ಅನುಷ್ಠಾನಕ್ಕೆ ತಂದಿದೆ. ಇದೊಂದು ಚಾರಿತ್ರಿಕ ನಿರ್ಧಾರ. ಸದಾಶಿವ ಆಯೋಗದ ವರದಿ, ಸಚಿವ ಸಂಪುಟದ ಸಮಿತಿ ಶಿಫಾರಸಿನ ಅನುಗುಣವಾಗಿ ಒಳ ಮೀಸಲಾತಿ ಜಾರಿಯಾಗಿದೆ. ಇದರಿಂದ ಸಾಮಾಜಿಕ ನ್ಯಾಯವಂಚಿತ ಸಮುದಾಯಗಳಿಗೆ ನ್ಯಾಯ ಸಿಕ್ಕಿದೆ ಎಂದು ಮೆಚ್ಚುಗೆ ಸೂಚಿಸಿದರು.