ಬೆಂಗಳೂರು:ಗ್ರಾಮೀಣ ಪ್ರದೇಶದ ಜನರಿಗೆ ಕಡಿಮೆ ದರದಲ್ಲಿ ಔಷಧಿ ಒದಗಿಸುವ ಉದ್ದೇಶದಿಂದ ರಾಷ್ಟ್ರದಲ್ಲಿ ಮೊದಲ ಬಾರಿಗೆ ಸಹಕಾರಿ ಕ್ಷೇತ್ರಕ್ಕೆ ಮಾರಾಟದ ಏಜೆನ್ಸಿ ನೀಡಲಾಗುತ್ತಿದ್ದು, ಜನರಿಕ್ ಔಷಧದ ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳನ್ನು ತೆರೆಯಲಾಗುವುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ತಿಳಿಸಿದ್ದಾರೆ.
ಮಹಾಮಂಡಳದ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಜನೌಷಧಿ ಕೇಂದ್ರ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಜನರಿಕ್ ಔಷಧಗಳ ವಿತರಣಾ ಕೇಂದ್ರವನ್ನು ತೆರೆಯಲು ಕೇಂದ್ರ ಸರ್ಕಾರದಿಂದ ಅನುಮತಿ ದೊರೆತಿದೆ. ಈ ಕೇಂದ್ರವನ್ನು ನ.6 ರಂದು ಬೆಂಗಳೂರಿನ ಮಾರಾಟ ಮಹಾಮಂಡಳದ ಕೇಂದ್ರ ಕಚೇರಿಯಲ್ಲಿ ಕೇಂದ್ರ ರಾಸಾಯನಿಕ ಗೊಬ್ಬರ ಸಚಿವ ಡಿ. ವಿ. ಸದಾನಂದಗೌಡ ವರ್ಚ್ಯುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಮತ್ತಿತರ ಉನ್ನತ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಸಹಕಾರ ಮಾರಾಟ ಮಹಾ ಮಂಡಳವು 77 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ರಾಜ್ಯದಲ್ಲಿ 40 ಶಾಖೆಗಳ ಮೂಲಕ ರಸಗೊಬ್ಬರವನ್ನು ತನ್ನ ಸದಸ್ಯ ಸಂಘಗಳ ಮೂಲಕ ವಿತರಿಸುತ್ತಿದೆ. ಸಹಕಾರ ಸಂಸ್ಥೆಗಳ ಮೂಲಕ ಕೃಷಿ ಉತ್ಪನ್ನಗಳನ್ನು ಖರೀದಿಸುತ್ತಿದೆ. 2019-20 ನೇ ಸಾಲಿನಲ್ಲಿ 2584.83 ಕೋಟಿ ರೂ. ವ್ಯವಹಾರ ನಡೆಸಿದ್ದು, 34.22 ಕೋಟಿ ರೂ. ಲಾಭ ಗಳಿಸಿದೆ ಎಂದು ವಿವರಿಸಿದರು.
ರೈತರ ಬೆಳೆಗಳಿಗೆ ನ್ಯಾಯುತವಾದ ಬೆಲೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಕನಿಷ್ಟ ಬೆಂಬಲ, ಮಾರುಕಟ್ಟೆ ಮಧ್ಯಪ್ರವೇಶ, ಬೆಲೆ ಸ್ಥಿರೀಕರಣ ಯೋಜನೆಗಳಡಿ ಮಹಾಮಂಡಳ ಏಜೆನ್ಸಿಯಾಗಿ ಖರೀದಿ ಕಾರ್ಯ ನಿರ್ವಹಿಸುತ್ತಿದೆ. ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮದ ಯೋಜನೆಯಡಿ ಆರ್ಥಿಕ ನೆರವಿನೊಂದಿಗೆ ಮಹಾಮಂಡಳ ರಾಜ್ಯಾದ್ಯಂತ 1.74 ಲಕ್ಷ ಮೆಟ್ರಿಕ್ ಟನ್ ಸಾಮರ್ಥ್ಯ ದ 135 ಗೋದಾಮುಗಳನ್ನು ಹೊಂದಿದೆ. ದಾವಣಗೆರೆ ಜಿಲ್ಲೆಯಲ್ಲಿ 12.50 ಲಕ್ಷ ಮೆಟ್ರಿಕ್ ಸಾಮರ್ಥ್ಯದ ಗ್ರೀನ್ ಫೀಲ್ಡ್ ಯೂರಿಯಾ ಉತ್ಪಾದನಾ ಘಟಕ ಪ್ರಾರಂಭಿಸಲು ರಾಜ್ಯ ಸರ್ಕಾರದ ಅನುಮತಿಗಾಗಿ ಪತ್ರ ಬರೆದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ರೈತರ ಅನುಕೂಲಕ್ಕಾಗಿ ಚಿಲ್ಲರೆ ರೂಪದಲ್ಲಿ ರಸಗೊಬ್ಬರ, ಕ್ರಿಮಿನಾಶಕ, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರಾಜ್ಯದಲ್ಲಿ 50 ಸ್ಥಳಗಳನ್ನು ಗುರುತಿಸಲಾಗಿದೆ. ಈಗಾಗಲೇ 10 ಸ್ಥಳಗಳಲ್ಲಿ ಮಳಿಗೆಗಳು ಕಾರ್ಯಾರಂಭ ಮಾಡಿವೆ. ಉಳಿದ ಮಾರಾಟ ಮಳಿಗೆಗಳನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಲಾಜಿಸ್ಟಿಕ್ ವೇರ್ ಹೌಸ್ ಮತ್ತು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಲಾಗುವುದು. ಇ-ಮಾರ್ಕೆಟ್ ಘಟಕಗಳನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಹಾಮಂಡಳದ ಕಾರ್ಯ ಚಟುವಟಿಕೆಗಳು:
ಮಾರಾಟ ಮಹಾಮಂಡಳವು ರೈತರಿಗೆ ಸಕಾಲದಲ್ಲಿ ಕಡಿಮೆ ದರದಲ್ಲಿ ರಸಗೊಬ್ಬರಗಳನ ಪೂರೈಸಿ ಕೃಷಿಗೆ ನೆರವಾಗುತ್ತಾ ಬಂದಿದೆ. ಪ್ರಸ್ತುತ ವರ್ಷ ಒಟ್ಟು 3.84 ಲಕ್ಷ ಮೆ.ಟನ್ ರಸಗೊಬ್ಬರ ದಾಸ್ತಾನು ಇದ್ದು, ಈಗಾಗಲೇ 28 ಲಕ್ಷ ಮೆ.ಟನ್ ಸರಬರಾಜು ಮಾಡಲಾಗಿದೆ. ಈಗ 94661 ಮೆ.ಟನ್ ದಾಸ್ತಾನು ಇದೆ ಎಂದರು.