ಬೆಂಗಳೂರು : ಉದ್ದಿಮೆ ಸ್ಥಾಪಿಸಿ ಆರ್ಥಿಕವಾಗಿ ಸ್ವಾವಲಂಬನೆ, ಸ್ವಾಭಿಮಾನದ ಜೀವನ ನಡೆಸಲು ಬಯಸುವ ಪರಿಶಿಷ್ಟ ಜಾತಿ ಸಮುದಾಯದವರಿಗೆ ಶೇಕಡ 4 ರಿಂದ 5ರಷ್ಟು ರಿಯಾಯಿತಿ ಬಡ್ಡಿ ದರದ ಸಾಲ ಸೌಲಭ್ಯ ಒದಗಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಈಕ್ವಿಟಿ ಶೇರ್ನಡಿ ಈ ಮೊದಲು ರಾಜ್ಯ ಸರ್ಕಾರಗಳಿಗೆ ನೀಡಲಾಗುತ್ತಿತ್ತು. ಆದರೆ ಬಹುತೇಕ ರಾಜ್ಯಗಳು ಖಾತರಿಗೆ ಹಿಂಜರಿದು ಬೇಡವೆಂದು ತಿಳಿಸಿವೆ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ಎ. ನಾರಾಯಣಸ್ವಾಮಿ ಹೇಳಿದ್ದಾರೆ.
ವಿಕಾಸಸೌಧದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ವಿವಿಧ ಇಲಾಖೆಗಳು ಸಾಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇದರಿಂದಾಗಿ ಕೇಂದ್ರ ಸರ್ಕಾರ ನೇರವಾಗಿ ಬ್ಯಾಂಕ್‌ಗಳಿಗೆ ಈಕ್ವಿಟಿ ಶೇರ್ ನೀಡುತ್ತಿದೆ. ಬಡ್ಡಿ ಸಹಾಯಧನದ ಮೊತ್ತವನ್ನು ಕೇಂದ್ರ ಭರಿಸುತ್ತಿದೆ. ಉದ್ದಿಮೆ ಸ್ಥಾಪಿಸಲು ಬಯಸಿದ ಅರ್ಜಿದಾರರು ಸಲ್ಲಿಸಿರುವ ಪ್ರಸ್ತಾವನೆಯ ಅನುಸಾರ ಒಂದು ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಬಡ್ಡಿ ಸಹಾಯಧನದ ಸಾಲ ಲಭಿಸುತ್ತದೆ. ಆದರೆ ಒಂದು ಲಕ್ಷ ರೂ.ವರೆಗಿನ ಸಾಲಕ್ಕೆ ಮಾತ್ರ ಸಿಬಿಲ್ ಸ್ಕೋರ್ ರಿಯಾಯಿತಿ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಈ ಯೋಜನೆಯಡಿ ಐದು ಸಾವಿರ ಕೋಟಿ ರೂ.ಗೆ ಹೆಚ್ಚು ಅನುದಾನ ಮೀಸಲಿದೆ. ಬಹುತೇಕ ಬ್ಯಾಂಕ್‌ಗಳು ಸಾಲ ಕೊಡಲು ಮುಂದೆ ಬಂದಿಲ್ಲ. ಯೋಜನೆ ಬಗ್ಗೆ ಮಾಹಿತಿ ನೀಡುವ ಲೆಕ್ಕ ಕೂಡ ಹಾಕಿಲ್ಲ. ಅನುಷ್ಠಾನದ ಜವಾಬ್ದಾರಿ ಹೊತ್ತ ಇಲಾಖೆ ಅಧಿಕಾರಿಗಳು ಉದಾಸೀನ ಮಾಡಿದ್ದಾರೆ ಎಂದು ಇಲಾಖೆಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ಭೂ ಒಡೆತನ ಯೋಜನೆಯಡಿ ದಲಿತರಿಗೆ ಮಂಜೂರಾದ ಜಮೀನು ಅಕ್ರಮವಾಗಿ ಬೇರೆಯವರ ವಶದಲ್ಲಿರುವ ಐದರಿಂದ ಆರು ಸಾವಿರ ಪ್ರಕರಣಗಳು ಬೆಳಕಿಗೆ ಬಂದಿವೆ. ಭೂ ಮಂಜೂರಾತಿ ಹಕ್ಕುಪತ್ರ, ಪಹಣಿಗಳಿವೆ. ಸಾಗುವಳಿ ಮಾಡಿ ಉಣ್ಣುವ ಅವಕಾಶ ಸಿಕ್ಕಿಲ್ಲ. ಈ ಬಗ್ಗೆ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಂಚಿತರು ದೂರು ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೂರು :ವಂಚಿತ ದಲಿತರಿಗೆ ಜಮೀನು ಮರಳಿಸಲು 2024ರ ಜನವರಿ ಗಡುವು ವಿಧಿಸಿರುವೆ. ಸೂಚನೆ ಪಾಲನೆಯಾಗದಿದ್ದಲ್ಲಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು ಸಲ್ಲಿಸಿ, ಕ್ರಮಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವುದಾಗಿ ಸಚಿವ ನಾರಾಯಣಸ್ವಾಮಿ ತಿಳಿಸಿದರು.
ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವವರು 50, 53 ನಮೂನೆ ಅರ್ಜಿ ಸಲ್ಲಿಸಿ ಸಾಗುವಳಿ ಚೀಟಿಗೆ ಶೋಷಿತ ಸಮುದಾಯಗಳು ಕೋರಿವೆ. ಒಂದೇ ಊರು, ಒಂದೇ ಸರ್ವೇ ನಂಬರ್‌ನ ಮೇಲ್ವರ್ಗದವರಿಗೆ ಸಾಗುವಳಿ ಚೀಟಿ ನೀಡಿ, ಶೋಷಿತರನ್ನು ಕಡೆಗಣಿಸಿರುವುದನ್ನು ಪರಿಶೀಲನೆಯಲ್ಲಿ ಗಮನಕ್ಕೆ ಬಂದಿದೆ. ದಲಿತರ ಜಮೀನು ಅಕ್ರಮವಾಗಿ ಬೇರೆಯವರ ಸುಪರ್ದಿ, ಬಗರ್ ಹುಕುಂ ಸಾಗುವಳಿ ಚೀಟಿ ವಿತರಣೆ ಮಾಡದ ಕಾರಣಗಳನ್ನು ತಿಳಿಯಬೇಕಾಗಿದೆ. ಈ ಹಿನ್ನೆಲೆಯಲ್ಲಿ ಎರಡೂ ವರ್ಗದ ಪ್ರಕರಣಗಳ ಬಗ್ಗೆ ಆಯಾ ಜಿಲ್ಲಾಧಿಕಾರಿಗಳ ಮುಖೇನ ತನಿಖೆ ನಡೆಸಿ, ಕಾನೂನು ರೀತಿಯ ಕ್ರಮಕ್ಕೆ ಸೂಚಿಸಿರುವುದಾಗಿ ಹೇಳಿದರು.
ಪರಿಶಿಷ್ಟ ಜಾತಿಯವರ ದೌರ್ಜನ್ಯ ತಡೆ ಕಾಯ್ದೆ ಮೊಕದ್ದಮೆಗಳ ಸಂಖ್ಯೆ ಸ್ವಲ್ಪಮಟ್ಟಿಗೆ ಏರಿಕೆ ಕಂಡು ಬಂದಿದೆ. ಕಾರ್ಯ-ಕಾರಣಗಳನ್ನು ತಿಳಿದು ಕ್ರಮಕೈಗೊಳ್ಳಲು ತಿಳಿಸಿರುವೆ. ಕಡ್ಡಾಯವಾಗಿದ್ದರೂ ಬಹುತೇಕ ಕಡೆ ನಡೆಸಿಲ್ಲ. ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಿದ್ದು, ಸೌಹಾರ್ದ ವಾತಾವರಣ ಮೂಡಿಸುವ ಜತೆಗೆ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ತಾಕೀತು ಮಾಡಿರುವೆ. ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿ, ಎಸ್‌ಸಿ-ಎಸ್‌ಟಿ ಮೀಸಲು ಪ್ರಮಾಣ ಏರಿಸಿದ್ದರೂ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.