ಕರ್ನಾಟಕ

karnataka

ETV Bharat / state

ಸಿಎಂ ಹುದ್ದೆಗೆ ಜಗಳ ಆಡೋರು, ಬೆಂಗಳೂರು ಉದ್ಧಾರ ಮಾಡಲ್ಲ: ಕಾಂಗ್ರೆಸ್​ ವಿರುದ್ಧ ಅಮಿತ್ ಶಾ ವಾಗ್ದಾಳಿ - ಡಾ ನಿರ್ಮಲಾನಂದನಾಥ ಸ್ವಾಮೀಜಿ

ನಾವು ರಾಜ್ಯಕ್ಕೆ ಕೊಟ್ಟ ಅನುದಾನದ ಬಗ್ಗೆ ನಮ್ಮ ಕಾರ್ಯಕರ್ತರು ಲೆಕ್ಕ ಹೇಳ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ತಿಳಿಸಿದ್ದಾರೆ.

ಅಮಿತ್ ಶಾ
ಅಮಿತ್ ಶಾ

By

Published : Mar 26, 2023, 9:34 PM IST

Updated : Mar 26, 2023, 10:27 PM IST

ಬೆಂಗಳೂರು : ಕರ್ನಾಟಕ ವಿಕಾಸಕ್ಕೆ ಜಗಳ ಗಂಟ ಪಕ್ಷ ಬೇಕಾಗಿಲ್ಲ. ಸಿಎಂ ಹುದ್ದೆಗೆ ಜಗಳ ಆಡೋರು ಬೆಂಗಳೂರು ಉದ್ಧಾರ ಮಾಡಲ್ಲ ಎಂದು ಕಾಂಗ್ರೆಸ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.

ವಿಧಾನಸೌಧದಲ್ಲಿ ಬೆಂಗಳೂರು ಹಬ್ಬ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ಸೋನಿಯಾ, ಮನಮೋಹನ್ ಸಿಂಗ್ ಅವರು ಕರ್ನಾಟಕಕ್ಕೆ ಬಂದು ತಾವು ಕೊಟ್ಟ ಅನುದಾನ ಎಷ್ಟು ಅಂತ ಲೆಕ್ಕ ಹೇಳಲಿ. ನಾವು ಕೊಟ್ಟ ಅನುದಾನದ ಬಗ್ಗೆ ನಮ್ಮ ಕಾರ್ಯಕರ್ತರು ಲೆಕ್ಕ ಹೇಳ್ತಾರೆ. ಯುಪಿಎ ಸರ್ಕಾರ ಇದ್ದಾಗ ರಾಜ್ಯಕ್ಕೆ ಕಡಿಮೆ ಅನುದಾನ ಬರ್ತಿತ್ತು. ನಾವು ಬಂದ ಮೇಲೆ ರಾಜ್ಯದ ಪಾಲಿನ ಅನುದಾನ ಹೆಚ್ಚಾಗಿದೆ. ವಿವಿಧ ಯೋಜನೆಗಳಿಗೆ ಅನುದಾನ ಮೊದಲಿಗಿಂತ ಹೆಚ್ಚಾಗಿ ಬರ್ತಿದೆ. ಮೋದಿ ನೇತೃತ್ವದಲ್ಲೇ ಕರ್ನಾಟಕ ವಿಕಾಸವಾಗಲಿದೆ ಎಂದು ತಿಳಿಸಿದರು.

ಈ ಬಾರಿ ನಮಗೆ ಬಹುಮತ ಕೊಡಿ : ಯಡಿಯೂರಪ್ಪ, ಬೊಮ್ಮಾಯಿ ನೇತೃತ್ವದಲ್ಲಿ ಮೋದಿಯವರು ಕರ್ನಾಟಕದ ವಿಕಾಸಕ್ಕೆ ಸಾಕಷ್ಟು ಕಾರ್ಯಕ್ರಮ ಕೊಟ್ಟಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಡಬಲ್ ಇಂಜಿನ್ ಸರ್ಕಾರಗಳಿಂದ ಕರ್ನಾಟಕದ ವಿಕಾಸ ಸಾಕಷ್ಟಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕೋವಿಡ್ ಉತ್ತಮ ನಿರ್ವಹಣೆ ಮಾಡಿದ್ದಾರೆ‌. ಯಡಿಯೂರಪ್ಪ ಕೋವಿಡ್ ನಿರ್ವಹಣಾ ಕೆಲಸಗಳು ಶ್ಲಾಘನೀಯ. ಬೊಮ್ಮಾಯಿಯವರೂ ನಂತರ ಬಂದು ಕೋವಿಡ್ ನಿಯಂತ್ರಣಾ ಕಾರ್ಯ ಮುಂದುವರೆಸಿದರು ಎಂದರು.

ಕಳೆದ ಸಲ 104 ಸೀಟ್ ಬಿಜೆಪಿಗೆ ಬಂತು. ಆದ್ರೆ ಬಹುಮತ ಬರಲಿಲ್ಲ. ಈ ಬಾರಿ ಇಲ್ಲಿನ ಜನ ನಮಗೆ ಬಹುಮತ ಕೊಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದರು.

ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟವರು ಕಾಂಗ್ರೆಸ್- ಶಾ: ಧರ್ಮದ ಆಧಾರದಲ್ಲಿ ಮೀಸಲಾತಿ ಕೊಟ್ಟವರು ಕಾಂಗ್ರೆಸ್ ಪಕ್ಷ‌. ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ಇಲ್ಲ. ಧರ್ಮದ ಆಧಾರದಲ್ಲಿದ್ದ 4% ಮೀಸಲಾತಿಯನ್ನು ಬೊಮ್ಮಾಯಿ ಸಮಾಪ್ತಿಗೊಳಿಸಿದ್ದಾರೆ ಎಂದು ತಿಳಿಸಿದರು.

ಆ 4% ಮೀಸಲಾತಿಯನ್ನು ಲಿಂಗಾಯತ, ಒಕ್ಕಲಿಗ ಸಮುದಾಯಗಳಿಗೆ ಹಂಚಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯ ಕೊಡಲಾಗಿದೆ ಎಂದು ಸರ್ಕಾರದ ಮೀಸಲಾತಿ ಮರು ಹಂಚಿಕೆ ಕ್ರಮಕ್ಕೆ ಅಮಿತ್ ಶಾ ಸಮರ್ಥಿಸಿಕೊಂಡರು. ಇವತ್ತು ಕರ್ನಾಟಕದಲ್ಲಿ ಐತಿಹಾಸಿಕ ದಿನ. ಇಬ್ಬರು ಮಹಾತ್ಮರ ಪ್ರತಿಮೆಗಳ ಅನಾವರಣ ಆಗಿದೆ. ಜಗತ್ತಿಗೆ ಕರ್ನಾಟಕದಿಂದ ಸಂದೇಶ ಸಾರಿದ ಮಹಾತ್ಮರು ಇವರಿಬ್ಬರೂ‌ ವಿಧಾನಸಭೆಗೆ ಮುಂದೆ ಆಯ್ಕೆ ಆಗಿ ಬರೋರಿಗೆ ಬಸವಣ್ಣ, ಕೆಂಪೇಗೌಡರು ಮಾದರಿ, ಆದರ್ಶ ಆಗಿರಲಿ. ನಾನು ಇವತ್ತು ಪ್ರತಿಮೆಗಳ ಅನಾವರಣ ಮಾಡಿ ಸೌಭಾಗ್ಯಶಾಲಿ ಆಗಿದ್ದೇನೆ ಎಂದು ಅಮಿತ್​ ಶಾ ಹೇಳಿದರು.

ಕೆಂಪೇಗೌಡರ ಪ್ರತಿಮೆ ವಿಧಾನಸೌಧದಲ್ಲಿ ಅವಶ್ಯಕವಾಗಿ ಬೇಕಿತ್ತು: ಭಾರತದಲ್ಲೇ ಲೋಕತಂತ್ರ ವ್ಯವಸ್ಥೆಯ ಜನನ, ಅನುಭವ ಮಂಟಪದ ಮೂಲಕ ಬಸವಣ್ಣ ಲೋಕತಂತ್ರದ ವ್ಯವಸ್ಥೆ ತಂದವರು. ಬಸವಣ್ಣ ವಚನಗಳ ಮೂಲಕ ಜೀವನಾಮೃತದ‌ ಸಂದೇಶ ಸಾರಿದವರು. ಬಸವಣ್ಣ ಪ್ರತಿಮೆ ಅನಾವರಣ ಮೂಲಕ ಲೋಕತಂತ್ರದ ಮೇಲೆ ಮತ್ತಷ್ಟು ವಿಶ್ವಾಸ ಹೆಚ್ಚಾಗಿದೆ. ನಾಡಪ್ರಭು ಕೆಂಪೇಗೌಡ ಬೆಂಗಳೂರಿನಂಥ ಅದ್ಭುತ ನಗರ ನಿರ್ಮಿಸಿದವರು. ಸಾವಿರಾರು ಕೆರೆ ಕಟ್ಟೆಗಳ ನಿರ್ಮಾತೃ. ಕೆಂಪೇಗೌಡರ ಪ್ರತಿಮೆ ವಿಧಾನಸೌಧದಲ್ಲಿ ಅವಶ್ಯಕವಾಗಿ ಬೇಕಿತ್ತು ಎಂದರು.

ಕೃಷ್ಣಾ ಮೇಲ್ದಂಡೆ, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಯೋಜನೆಗಳು ಸೇರಿದಂತೆ ಬಂದರುಗಳ ಅಭಿವೃದ್ಧಿ ಮೊದಲಾದ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಸಮರ್ಥವಾಗಿ ಅನುಷ್ಠಾನ ಮಾಡಿರುವುದು ಅಭಿವೃದ್ಧಿಯ ಇಚ್ಚಾಶಕ್ತಿಗೆ ಸಾಕ್ಷಿಯಾಗಿದೆ. 11 ನೇ ಸ್ಥಾನದಲ್ಲಿದ್ದ ದೇಶದ ಆರ್ಥಿಕ ವ್ಯವಸ್ಥೆಯು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಳೆದ 9 ವರ್ಷಗಳ ಸಮರ್ಥ ಆಡಳಿತದಲ್ಲಿ 5ನೇ ಸ್ಥಾನಕ್ಕೇರಿದೆ ಎಂದು ಹೇಳಿದರು.

ನನ್ನ ತುಂಬಾ ದಿನದ ಕನಸು ನನಸಾಗಿದೆ: ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಾನು ಆ ಜಾತಿ ಈ ಜಾತಿ ಅಂತ ಆಡಳಿತ ನಡೆಸದೇ ಎಲ್ಲ ಸಮುದಾಯಗಳಿಗೂ ಸಮಾನವಾಗಿ ಕಾರ್ಯಕ್ರಮಗಳನ್ನು ನೀಡಿದವನು. ಈ ದಾರಿಯಲ್ಲಿ ಬೊಮ್ಮಾಯಿ ಅವರು ಸಾಗಿ ಅನೇಕ ಕಾರ್ಯಕ್ರಮ ತಂದಿದ್ದಾರೆ. ಇವತ್ತು ನಮಗೆ ಎಲ್ಲರಿಗೂ ಅತ್ಯಂತ ಸಂತೋಷ ದಿನ. ವಿಧಾನಸೌಧದ ಮುಂದೆ ಇಬ್ಬರ ಮಹನೀಯರ ಪ್ರತಿಮೆ ಅನಾವರಣ ಗೊಂಡಿದೆ. ಈ ಪ್ರತಿಮೆಗಳನ್ನು ವಿಧಾನಸೌಧದ ಮುಂದೆ ಪ್ರತಿಷ್ಠಾಪನೆ ಮಾಡಿರೋದು ನನ್ನ ತು‌ಂಬಾ ದಿನದ ಕನಸು ಆಗಿತ್ತು. ಇಂದು ಆ ಕನಸು ಈಡೇರಿದ್ದಕ್ಕೆ ನನಗೆ ತುಂಬಾ ಸಂತೋಷ ಆಗಿದೆ ಎಂದರು.

ಈ ಮುಂಚೆಯೇ ಅನಾವರಣ ಆಗಬೇಕಿತ್ತು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯ ಏಕೀಕರಣಗೊಂಡ ಮೊದಲ ಹತ್ತು ವರ್ಷಗಳಲ್ಲಿಯೇ ವಿಧಾನಸೌಧದ ಮುಂಭಾಗದಲ್ಲಿ ಬಸವಣ್ಣನವರು ಹಾಗೂ ಕೆಂಪೇಗೌಡರ ಪ್ರತಿಮೆಗಳ ಸ್ಥಾಪನೆಯಾಗಬೇಕಿತ್ತು. ಆಧುನಿಕ ಕಾಲದ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾಸೌಧವಾಗಿರುವ ವಿಧಾನಸೌಧದಲ್ಲಿನ ಚರ್ಚೆಗಳಲ್ಲಿ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಬಸವಣ್ಣನವರ ಅನುಭವ ಮಂಟಪದ ವಿಚಾರಗಳ ಮೌಲ್ಯಗಳು ನಿರಂತರವಾಗಿ ಸಾಗಬೇಕು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ದೂರದೃಷ್ಟಿಯ ಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರ ಆದರ್ಶಗಳು ಸದಾ ಕಾಲ ನಮಗೆ ಸ್ಫೂರ್ತಿಯಾಗಲಿವೆ ಎಂದರು.

ಪ್ರತಿಮೆಗಳ ಅನಾವರಣ : ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಧಾನಸೌಧದ ಎದುರು ಜಗಜ್ಯೋತಿ ಬಸವಣ್ಣ, ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳ ಅನಾವರಣಗೊಳಿಸಿದರು. ಇಬ್ಬರು‌ ಮಹನೀಯರ ಅಶ್ವಾರೂಢ ಕಂಚಿನ ಪ್ರತಿಮೆಗಳನ್ನು ಅನಾವರಣ ಮಾಡಿದರು. 24 ಅಡಿ ಎತ್ತರದ ಪ್ರತಿಮೆಗಳನ್ನು 8 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಝಗಮಗ ಲೇಸರ್ ಹೊನಲು ಬೆಳಕಿನ ರಂಗಿನ‌ ಮಧ್ಯೆ ಪ್ರತಿಮೆಗಳ‌ ಅನಾವರಣಗೊಳಿಸಲಾಯಿತು. ಪ್ರತಿಮೆಗಳ‌ ಅನಾವರಣ ಬೆನ್ನಲ್ಲೇ ಆಗಸದಲ್ಲಿ ಬಾಣಬಿರುಸುಗಳ ಕಲರವ ಮೂಡಿತು.

ಮಠಾಧೀಶರ ಸಾನಿಧ್ಯದಲ್ಲಿ ಅನಾವರಣ : ಸಮಾರಂಭದಲ್ಲಿ ಆದಿಚುಂಚನಗಿರಿ ಡಾ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರಿನ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಪೇಜಾವರ ಶ್ರೀಗಳು, ಸಿದ್ಧಗಂಗಾ ಶ್ರೀಗಳು, ನಂಜಾವಧೂತ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಹರಿಹರ ವಚನಾನಂದ ಸ್ವಾಮಿ, ಒಕ್ಕಲಿಗ ಮಹಾಸಂಸ್ಥಾನದ ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ನಾಡಿನ ಅನೇಕ ಮಠಾಧೀಶರು ಪಾಲ್ಗೊಂಡಿದ್ದರು.

ಸಚಿವ ವಿ ಸೋಮಣ್ಣ ಗೈರು :ಬೆಂಗಳೂರು ಹಬ್ಬ ಸಮಾರೋಪ ಸಮಾರಂಭದಲ್ಲಿ ಸಚಿವ ವಿ‌. ಸೋಮಣ್ಣ ಗೈರು ಎದ್ದು ಕಂಡಿತು. ಈಗಾಗಲೇ ಮುನಿಸಿಕೊಂಡಿರುವ ವಿ. ಸೋಮಣ್ಣ ಅಮಿತ್ ಶಾ ಪಾಲ್ಗೊಂಡಿದ್ದ ಪ್ರತಿಮೆಗಳ ಅನಾವರಣ ಕಾರ್ಯಕ್ರಮದಲ್ಲಿ ಗೈರಾಗಿರುವುದು ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಯಿತು‌.

ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ಬಸವರಾಜ ಸಚಿವ ಆರ್. ಅಶೋಕ, ಸಿ. ಸಿ ಪಾಟೀಲ, ಮುರುಗೇಶ್ ನಿರಾಣಿ, ಗೋವಿಂದ ಕಾರಜೋಳ, ಸಿ. ಎನ್ ಅಶ್ವತ್ಥನಾರಾಯಣ, ಡಾ. ಕೆ ಸುಧಾಕರ್, ಮುನಿರತ್ನ, ಸಂಸದರಾದ ತೇಜಸ್ವಿಸೂರ್ಯ, ಪಿ. ಸಿ. ಮೋಹನ್, ಎಸ್. ಆರ್ ವಿಶ್ವನಾಥ್ ಸೇರಿದಂತೆ ಅನೇಕ ಶಾಸಕರು, ಚುನಾಯಿತ ಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಇದನ್ನೂ ಓದಿ :ಗೋರ್ಟಾ ಗ್ರಾಮಕ್ಕೆ ಅಮಿತ್​ ಶಾ ಭೇಟಿ.. ಸರ್ದಾರ್ ಪಟೇಲ್ ಪ್ರತಿಮೆ, 103 ಅಡಿ ಎತ್ತರದ ರಾಷ್ಟ್ರ ಧ್ವಜ ಸ್ತಂಭ ಅನಾವರಣ

Last Updated : Mar 26, 2023, 10:27 PM IST

ABOUT THE AUTHOR

...view details