ಕರ್ನಾಟಕ

karnataka

ETV Bharat / state

NEP: ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತಿಗೆ ಮೊದಲ ಆದ್ಯತೆ; ಕ್ಷುಲ್ಲಕ ರಾಜಕಾರಣ ನಿಲ್ಲಿಸೋಣ- ಧರ್ಮೇಂದ್ರ ಪ್ರಧಾನ್

NEP: ನೂತನ ಶಿಕ್ಷಣ ನೀತಿಯನ್ನು ರದ್ದುಪಡಿಸುವ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಶಿಕ್ಷಣ ಸಚಿವಧರ್ಮೇಂದ್ರ ಪ್ರಧಾನ್
ಕೇಂದ್ರ ಶಿಕ್ಷಣ ಸಚಿವಧರ್ಮೇಂದ್ರ ಪ್ರಧಾನ್

By

Published : Aug 17, 2023, 10:49 PM IST

ಬೆಂಗಳೂರು : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಶಿಕ್ಷಣ ನೀತಿಯನ್ನು(NEP) ರಾಜ್ಯದಲ್ಲಿ ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವುದಕ್ಕೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತಿಗೆ ಮೊದಲ ಆದ್ಯತೆಯನ್ನು ಕೊಡೋಣ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸೋಣ ಎಂದು ಸಾಮಾಜಿಕ ಜಾಲತಾಣ X ಆ್ಯಪ್‌ನಲ್ಲಿ ಕನ್ನಡದಲ್ಲಿಯೇ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.

ಶಿಕ್ಷಣವು ಪ್ರಗತಿಯ ದಾರಿದೀಪವಾಗಬೇಕೇ ವಿನಃ ರಾಜಕೀಯದ ದಾಳವಾಗಬಾರದು. ರಾಷ್ಟ್ರೀಯ ಶಿಕ್ಷಣ ನೀತಿ 2020 ಅನ್ನು ಸ್ಥಗಿತಗೊಳಿಸುವ ಕರ್ನಾಟಕ ರಾಜ್ಯದ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಪ್ರೇರಿತ ನಿರ್ಧಾರದ ಬಗ್ಗೆ ತಿಳಿದು ನಿರಾಶೆಯಾಗಿದೆ. ನಮ್ಮ ಶಿಕ್ಷಣ ವ್ಯವಸ್ಥೆಗೆ ವಿಕಸನದ ಅಗತ್ಯವಿದೆಯೇ ಹೊರತು ಹಿಂಜರಿಕೆಯಲ್ಲ ಎಂದು ಹೇಳಿದ್ದಾರೆ.

ಎನ್‍ಇಪಿ ಎಂಬುದು ಹಲವು ವರ್ಷಗಳ ಗಂಭೀರ ಸಮಾಲೋಚನೆಗಳನ್ನು ಜನರ ಆಶೋತ್ತರಗಳನ್ನು ಪ್ರತಿಬಿಂಬಿಸುವ ಫಲಿತಾಂಶ. ಈ ನಿರ್ಧಾರವು ಕಾಂಗ್ರೆಸ್​ನ ಸುಧಾರಣೆ-ವಿರೋಧಿ, ಭಾರತೀಯ ಭಾಷಾ ವಿರೋಧಿ ಮತ್ತು ಕರ್ನಾಟಕ ವಿರೋಧಿ ಗುಣಗಳನ್ನು ಬಹಿರಂಗಪಡಿಸುತ್ತದೆ. ಕರ್ನಾಟಕವು ಪ್ರಗತಿ ಶೀಲ ಮತ್ತು ಸರ್ವರನ್ನು ಒಳಗೊಳ್ಳುವಿಕೆಗೆ ಬೆಲೆಕೊಡುವ ನಾಯಕತ್ವವನ್ನು ಬಯಸುತ್ತದೆಯೇ ಹೊರತು ಕ್ಷುಲ್ಲಕ ರಾಜಕಾರಣವನ್ನಲ್ಲ. ವಿದ್ಯಾರ್ಥಿಗಳ ಭವ್ಯ ಭವಿಷ್ಯತ್ತಿಗೆ ಮೊದಲ ಆದ್ಯತೆಯನ್ನು ಕೊಡೋಣ. ಕ್ಷುಲ್ಲಕ ರಾಜಕಾರಣ ಮಾಡುವುದನ್ನು ನಿಲ್ಲಿಸೋಣ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಎನ್​ಇಪಿ :ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಎನ್ನುವ ಹೆಗ್ಗಳಿಕೆ ಕರ್ನಾಟಕದ್ದಾಗಿದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುತ್ತಿದ್ದಂತೆ ಪಠ್ಯಪುಸ್ತಕ ಪರಿಷ್ಕರಣೆ ಮಾಡಿತ್ತು. ಮುಂದುವರೆದು ಹೊಸ ಶಿಕ್ಷಣ ನೀತಿ ರದ್ದುಪಡಿಸಿ, ರಾಜ್ಯದ್ದೇ ಪ್ರತ್ಯೇಕ ವಿಶೇಷ ಶಿಕ್ಷಣ ನೀತಿ ಜಾರಿಗೆ ತರುವ ಘೋಷಣೆ ಮಾಡಿತ್ತು. ಮುಂದಿನ ವರ್ಷದಿಂದ ಎನ್ಇಪಿ ರದ್ದುಪಡಿಸುವ ಘೋಷಣೆ ಮಾಡಿದೆ.

ಇದರ ವಿರುದ್ಧ ಬಿಜೆಪಿ ದನಿ ಎತ್ತಿದ್ದು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ್, ಮಾಜಿ ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್, ಸುರೇಶ್ ಕುಮಾರ್, ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ಎನ್ಇಪಿ ರದ್ದು ವಿಚಾರ ಬಿಜೆಪಿ ವರಿಷ್ಠರ ತಲುಪಿದ್ದು, ಅವರ ಸೂಚನೆಯಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಅಭಿಯಾನದ ರೂಪದಲ್ಲಿ ಹೋರಾಟಕ್ಕೆ ಮುಂದಾಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ :ಕಾಂಗ್ರೆಸ್ ಶಾಸಕರು, ಉಸ್ತುವಾರಿ ಸಚಿವರೊಂದಿಗಿನ ಸರಣಿ ಸಭೆ ಮುಕ್ತಾಯ; ಅಸಮಾಧಾನ ಶಮನ ಕಸರತ್ತು ನಡೆಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details