ಬೆಂಗಳೂರು: ನಮ್ಮ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡಲು ಏರೋ ಇಂಡಿಯಾ ಉತ್ತಮ ವೇದಿಕೆಯಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ನಗರದ ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ 14ನೇ ಆವೃತ್ತಿಯ ಏರೋ ಇಂಡಿಯಾ ಶೋ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವರು. ಈ ಕುರಿತು ಇಂದು ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿದ್ದ ಏರೋ ಇಂಡಿಯಾ 2023 ರ ಕರ್ಟನ್ ರೈಸರ್ ಕಾರ್ಯಕ್ರಮದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಮಾತನಾಡಿ, ವಿಶ್ವಗುರು ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡರನ್ನು ಸ್ಮರಿಸಿದರು. ಏರೋ ಇಂಡಿಯಾದಲ್ಲಿ 2ನೇ ಬಾರಿಗೆ ಭಾಗಿಯಾಗಿದ್ದೇನೆ. ದೇಶಿಯ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡಲು ಏರೋ ಇಂಡಿಯಾ ಉತ್ತಮ ವೇದಿಕೆಯಾಗಿದೆ ಎಂದರು.
ಕಳೆದ ಹಲವಾರು ತಿಂಗಳ ಪರಿಶ್ರಮ ಈಗ ಫಲ ನೀಡುತ್ತಿದೆ. ಡೈನಾಮಿಕ್ ಸಿಎಂ ಬಸವರಾಜ ಬೊಮ್ಮಾಯಿಯವರಿಂದ ಇದು ಸಾಧ್ಯವಾಗಿದೆ. ಏರೋ ಇಂಡಿಯಾ ದೇಶದ ಐಟಿ ಕ್ಯಾಪಿಟಲ್‌ನಲ್ಲಿ ನಡೆಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದ ನಾಯಕರು ಆಗಮಿಸುತ್ತಿದ್ದಾರೆ. ನಮ್ಮ ಉತ್ಪಾದನೆ ಹಾಗೂ ಕೌಶಲ್ಯಗಳ ಪ್ರದರ್ಶನ ಮಾಡಲು ಅತ್ಯುತ್ತಮ ವೇದಿಕೆಯಾಗಿದೆ ಎಂದು ತಿಳಿಸಿದರು.
ದೇಶಕ್ಕೆ ರಾಜ್ಯದಿಂದ ಆರ್ಥಿಕ ಬಲ: ಕರ್ನಾಟಕ, ದೇಶಕ್ಕೆ ಆರ್ಥಿಕ ಬಲ ನೀಡುವುದರಲ್ಲಿ ಮೇಲಿನ ಸ್ಥಾನದಲ್ಲಿದೆ. ಸೇನೆಗೆ ಬೇಕಾದ ಅನೇಕ ಕಂಪನಿಗಳಿಗೆ ಜಾಗ ನೀಡಿದೆ. ರಾಜ್ಯ ಐಟಿ ಉತ್ಪಾದನಾ ಕ್ಯಾಪಿಟಲ್ ಆಗಿದೆ. 100ಕ್ಕೂ ಅಧಿಕ ದೇಶಗಳು ಈ ಶೋದಲ್ಲಿ ಭಾಗಿಯಾಗುತ್ತವೆ. ಕಳೆದ ಎಲ್ಲ ವರ್ಷಗಳ ಏರೋ ಇಂಡಿಯಾ ದಾಖಲೆಗಳನ್ನು ಈ ಶೋ ಮುರಿಯಲಿದೆ. ಈ ಬಾರಿ ಇಂಡಿಯಾ ಪೆವಿಲಿಯನ್ ಇರಲಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.
ಕರ್ನಾಟಕ ಪೆವಿಲಿಯನ್: ಡಿಫೆನ್ಸ್ ಮಿನಿಸ್ಟರ್‌ಗಳ ಕಾನ್ಕ್ಲೇವ್ ಇರಲಿದೆ. ಸೈಬರ್ ಸೆಕ್ಯೂರಿಟಿ, ಆಗ್ಯುಮೆಂಟೆಡ್ ರಿಯಾಲಿಟಿ ಸೇರಿದಂತೆ ಅನೇಕ ಹೊಸತನಗಳನ್ನು ಕಾಣಬಹುದಾಗಿದೆ. ಕರ್ನಾಟಕ ಪೆವಿಲಿಯನ್ ಕೂಡ ಕಾಣಬಹುದು. ರಾಜ್ಯದ ನಾಗರೀಕರ ಉದ್ಯೋಗ ಸೃಷ್ಟಿಸಲು ಇದು ಉಪಯೋಗವಾಗುತ್ತದೆ ಎಂದರು.
ಬೆಂಗಳೂರು ಏರೋಸ್ಪೇಸ್ ಕೇಂದ್ರ:ಕಾರ್ಯಕ್ರಮದಲ್ಲಿ ಸಿ ಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ರಾಜ್ಯವು ಏರೋಸ್ಪೇಸ್ ನೀತಿ ಹಾಗೂ ರಕ್ಷಣಾ ಪಾರ್ಕ್ ನ ಮೊದಲ ಹಂತ ಪೂರ್ಣಗೊಂಡಿದೆ. 2 ನೇ ಹಂತವೂ ಪ್ರಾರಂಭವಾಗುತ್ತಿದೆ. ಬೆಂಗಳೂರು ಏರೋಸ್ಪೇಸ್ ಕೇಂದ್ರವಾಗಿದೆ. ಇದು ಏರ್ ಶೊ ನಡೆಸಲು ಅತ್ಯಂತ ಸೂಕ್ತ ಸ್ಥಳ. ಭಾರತೀಯ ಏರೋಸ್ಪೇಸ್ ತಂತ್ರಜ್ಞಾನವನ್ನು ಇದರಿಂದ ಬಿಂಬಿಸಬಹುದಾಗಿದೆ. ಬೆಂಗಳೂರು ವಾಣಿಜ್ಯ ಮತ್ತು ರಕ್ಷಣಾ ಉತ್ಪಾದನೆ ಕೇಂದ್ರವಾಗಿದೆ. ಬೆಂಗಳೂರಿನಲ್ಲಿ ಸ್ವಂತ ಏರ್ ಕ್ರಾಪ್ಟ್ ತಯಾರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಈ ಕಾರ್ಯಸಾಧನೆಗೆ ಜಾಗತಿಕವಾಗಿ ಸಾಕಷ್ಟು ಕ್ರಮ ವಹಿಸಿದ್ದು, ಈ ದೇಶದ ಭವಿಷ್ಯಕ್ಕೆ ನಾವು ಸೂಕ್ತ ಸ್ಥಳ ಮತ್ತು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ಏರೋ ಇಂಡಿಯಾ ಶೋ ಆತಿಥ್ಯ ಗೌರವ: ಏರೋ ಇಂಡಿಯಾ ಶೋ ಆತಿಥ್ಯ ವಹಿಸುವುದು ಗೌರವದ ಸಂಕೇತ. ಇದರ ಆಯೋಜಿಸುವುದು ಕರ್ನಾಟಕ ಮತ್ತು ಬೆಂಗಳೂರಿಗೆ ಅಭ್ಯಾಸವಾಗಿದೆ. ಏರೊ ಸ್ಪೇಸ್ ಇಕೋ ಸಿಸ್ಟಮ್ ಅಭಿವೃದ್ಧಿಪಡಿಸಿದ ನಮ್ಮ ಹಿರಿಯರಿಗೆ ಅಭಿನಂದಿಸಬೇಕು ಎಂದರು.