ನವದೆಹಲಿ: ಭಾರತೀಯ ವಾಯುಪಡೆಗಾಗಿ 6,828.36 ಕೋಟಿ ರೂ ವೆಚ್ಚದಲ್ಲಿ 70 HTT-40 ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್‌ಗಳನ್ನು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್‌ಎಎಲ್) ನಿಂದ ಖರೀದಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಜರುಗಿದ ಭದ್ರತೆಯ ಸಂಪುಟ ಸಮಿತಿ ಸಭೆಯಲ್ಲಿ ಎಚ್‌ಟಿಟಿ-40 ಬೇಸಿಕ್ ಟ್ರೈನರ್ ಏರ್‌ಕ್ರಾಫ್ಟ್‌ಗಳನ್ನು ಖರೀದಿಸಲು ಗ್ರೀನ್ ಸಿಗ್ನಲ್ ನೀಡಲಾಯಿತು. ಈ ವಿಮಾನಗಳು ಹೊಸದಾಗಿ ಸೇರ್ಪಡೆಗೊಂಡ ಪೈಲಟ್‌ಗಳ ತರಬೇತಿಗಾಗಿ ಐಎಎಫ್‌ನ ಮೂಲ ತರಬೇತುದಾರ ವಿಮಾನಗಳ ಕೊರತೆ ನೀಗಿಸುತ್ತವೆ.
ಆರು ವರ್ಷಗಳ ಅವಧಿಯಲ್ಲಿ ಈ ವಿಮಾನಗಳನ್ನು ಪೂರೈಸಲಾಗುವುದು. ಈ ನಿರ್ಧಾರವು ಭಾರತೀಯ ಏರೋಸ್ಪೇಸ್ ರಕ್ಷಣಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೇ, 'ಆತ್ಮನಿರ್ಭರ್ ಭಾರತ್' ಕಡೆಗಿನ ಪ್ರಯತ್ನಗಳನ್ನು ಹೆಚ್ಚಿಸಲಿದೆ. ಉತ್ತಮ, ಕಡಿಮೆ ವೇಗದ ನಿರ್ವಹಣೆ ಗುಣಗಳನ್ನು ಹೊಂದುವ ಮತ್ತು ಉತ್ತಮ ತರಬೇತಿ ಪರಿಣಾಮಕಾರಿತ್ವ ಒದಗಿಸುವ ರೀತಿಯಲ್ಲಿ ವಿಮಾನಗಳನ್ನು ವಿನ್ಯಾಸಗೊಳಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ: ಈ ವಿಮಾನಗಳನ್ನು ಹೆಚ್‌ಎಎಲ್ ಆರು ವರ್ಷಗಳ ಅವಧಿಯಲ್ಲಿ ಪೂರೈಸಲಿದೆ. ಹೊಸ ಅವಕಾಶಗಳು ತೆರೆಯುತ್ತವೆ. ಸಾವಿರಾರು ಉದ್ಯೋಗಗಳನ್ನು ಇದು ಸೃಷ್ಟಿಸುತ್ತದೆ. ರಕ್ಷಣೆಯಲ್ಲಿ ಭಾರತದ ಸ್ವಾವಲಂಬನೆಯನ್ನು ಬಲಪಡಿಸುವ ಉದ್ದೇಶದಿಂದ ಇದೊಂದು ಮಹತ್ವದ ಹೆಜ್ಜೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.