ಬೆಂಗಳೂರು :ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಿದ್ದು, ಇದು ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ. ಹೀಗಾಗಿ, ಸಹಜವಾಗಿಯೇ ಜನರಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಪ್ರಸಕ್ತ ಬಜೆಟ್‌ನಲ್ಲಿ ಉದ್ಯೋಗ, ಮಕ್ಕಳ ಶಿಕ್ಷಣ, ಗೃಹ ಸಾಲ, ಆರೋಗ್ಯ ವಿಮೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗುವ ಸಾಧ್ಯತೆಯೂ ಇದೆ. ಮುಖ್ಯವಾಗಿ, ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಏರಿಕೆಯಾಗುವ ಸಂಭವ ಗೋಚರಿಸಿದೆ.
2024ರ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಬಜೆಟ್ ಮಂಡಿಸಲಿದೆ. ಇದು ದೇಶದ ಆರ್ಥಿಕಾಭಿವೃದ್ಧಿ ಉತ್ತೇಜಿಸುವ ಜೊತೆಗೆ ಜನರ ನಿರೀಕ್ಷೆಗಳನ್ನೂ ಈಡೇರಿಸಲಿದೆ ಎಂಬ ನಂಬಿಕೆ ಜನರದ್ದು. ಕೋವಿಡ್ ಸೋಂಕಿನಿಂದ ತತ್ತರಿಸಿರುವ ದೇಶ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಬಜೆಟ್ ಮೂಲಕ ಹಲವು ಬದಲಾವಣೆಗಳು ನಡೆಯಬಹುದು.
ಕಳೆದ ಬಜೆಟ್‌ನಲ್ಲಿ ಹೊಸ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸುವ ಮತ್ತು ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಿಸುವ ವಿಷಯದಲ್ಲಿ ಕೇಂದ್ರ ಸರ್ಕಾರ ಸಂಬಳ ಪಡೆಯುವ ವರ್ಗಕ್ಕೆ ಕೆಲವು ಬದಲಾವಣೆಗಳನ್ನು ತಂದಿತ್ತು. ಆದರೆ, ಇದರಿಂದ ಸಂಬಳ ಪಡೆಯುವ ಆದಾಯ ತೆರಿಗೆ ಪಾವತಿದಾರರಿಗೆ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಾಗಲಿಲ್ಲ. ಇಂತಹ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಬರುತ್ತಿರುವ ಕೇಂದ್ರ ಸರ್ಕಾರದ ಕೊನೆಯ ಬಜೆಟ್-2.0 ಮೇಲೆ ಆಶಾಭಾವನೆ ಇಟ್ಟುಕೊಳ್ಳಲಾಗಿದೆ.
ಮುಂಬರುವ ಬಜೆಟ್‌ನಲ್ಲಿ ಸರ್ಕಾರವು ಹಳೆಯ ಮತ್ತು ಹೊಸ ತೆರಿಗೆ ಪದ್ಧತಿಯ ಅಡಿಯಲ್ಲಿ ಆದಾಯ ತೆರಿಗೆಯ ವಾರ್ಷಿಕ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂಬುದು ಉದ್ಯೋಗಿಗಳೂ ಸೇರಿದಂತೆ ಜನಸಾಮಾನ್ಯರ ಆಶಯ. 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ವೈಯಕ್ತಿಕ ತೆರಿಗೆದಾರರಿಗೆ ಹಳೆ ಮತ್ತು ಹೊಸ ತೆರಿಗೆ ಪದ್ಧತಿಯಡಿಯಲ್ಲಿ ಚಾಲ್ತಿಯಲ್ಲಿರುವ 2.5 ಲಕ್ಷ ರೂ. ಆದಾಯ ತೆರಿಗೆ ವಾರ್ಷಿಕ ವಿನಾಯಿತಿ ಮಿತಿಯಲ್ಲಿ 2014 -15 ರಿಂದಲೂ ಯಾವುದೇ ಬದಲಾವಣೆ ಮಾಡಿಲ್ಲ. ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಹಣದುಬ್ಬರ, ತೆರಿಗೆ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರ ಸಂಖ್ಯೆ, ಸರ್ಕಾರ ಬಿಟ್ಟುಕೊಟ್ಟಿರುವ ತೆರಿಗೆ ಆದಾಯ ಮತ್ತಿತರ ಹಲವಾರು ಅಂಶಗಳನ್ನು ಪರಿಗಣಿಸಿ ಮೋದಿ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿ ಮರುಪರಿಶೀಲಿಸಬಹುದು ಎಂಬ ವಿಶ್ವಾಸವಿದೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಯೋಜನೆಯನ್ನು ಪರಿಚಯಿಸುವ ಮೂಲಕ 2018-19 ನೇ ಹಣಕಾಸು ವರ್ಷದಿಂದ ತೆರಿಗೆಮುಕ್ತ ವೈದ್ಯಕೀಯ ಮರುಪಾವತಿ ಮತ್ತು ಪ್ರಯಾಣ ಭತ್ಯೆ ವಿನಾಯಿತಿಯನ್ನು ಹಿಂಪಡೆಯಲಾಗಿದೆ. ಅಂದಿನಿಂದ ಕಡಿತದ ಮೊತ್ತ ಸ್ಥಿರವಾಗಿದೆ. ಆದರೆ, ವೈದ್ಯಕೀಯ ವೆಚ್ಚ ಮತ್ತು ಇಂಧನದ ವೆಚ್ಚವು ಗಣನೀಯವಾಗಿ ಹೆಚ್ಚಾಗಿದೆ. ಹೀಗಾಗಿ, ಸ್ಟ್ಯಾಂಡರ್ಡ್ ಡಿಡಕ್ಷನ್ ಮಿತಿಯನ್ನು ಪ್ರಸ್ತುತ ಅಸ್ತಿತ್ವದಲ್ಲಿರುವ 50 ಸಾವಿರ ರೂ.ದಿಂದ 1 ಲಕ್ಷ ರೂ. ವರೆಗೆ ಹೆಚ್ಚಿಸಲು ಸರ್ಕಾರವು ಪರಿಗಣಿಸಬಹುದು.
ಇದರ ಹೊರತಾಗಿ, ಹೊಸ ಪರ್ಯಾಯ ತೆರಿಗೆ ಪದ್ಧತಿಯಡಿ ತೆರಿಗೆಯನ್ನು ಆಯ್ಕೆ ಮಾಡುವ ತೆರಿಗೆದಾರರಿಗೂ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಯೋಜನ ಒದಗಿಸಲು ನಿರ್ಣಯಿಸಬಹುದು. ಏಕೆಂದರೆ ಈ ವೆಚ್ಚಗಳು ಯಾವುದೇ ಸಂಬಳದ ತೆರಿಗೆದಾರರಿಗೆ ಅವಶ್ಯಕ. ಇನ್ನು ವಿಮೆ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಪ್ರಸ್ತುತ ವೈಯಕ್ತಿಕ, ಸಂಗಾತಿ ಮತ್ತು ಅವಲಂಬಿತ ಮಕ್ಕಳನ್ನು ಒಳಗೊಂಡ ಆರೋಗ್ಯ ವಿಮಾ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ವಿನಾಯಿತಿ ಮಿತಿಯು 25 ಸಾವಿರ ರೂ.ನಷ್ಟಿದೆ.
ಅಲ್ಲದೇ, ಪೋಷಕರಿಗೆ 50 ಸಾವಿರ ರೂ.ಗಳ ಮಿತಿ ಇದೆ. ಅವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿರಬೇಕು. ಆಸ್ಪತ್ರೆಯ ವೆಚ್ಚ ಮತ್ತು ವೈದ್ಯಕೀಯ ವೆಚ್ಚಗಳು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿರುವುದನ್ನು ಪರಿಗಣಿಸಿ, ಈ ಮಿತಿಗಳನ್ನು ಕ್ರಮವಾಗಿ 50 ಸಾವಿರ ರೂ. ಮತ್ತು 1 ಲಕ್ಷ ರೂ.ಗೆ ಹೆಚ್ಚಿಸಬಹುದು.