ಕರ್ನಾಟಕ

karnataka

ETV Bharat / state

ಆರ್ಥಿಕತೆಗೆ ಬಿದ್ದ ಹೊಡೆತದ ನಡುವೆಯೂ, ರಾಜ್ಯದ ಜನರಿಗೆ ಬಜೆಟ್​ನಲ್ಲಿ ಉತ್ತಮ ಕೊಡುಗೆ ನಿರೀಕ್ಷೆ - Finance Minister Nirmala Sitharaman

ಹಣಕಾಸು ಸಚಿವೆಯಾಗಿ ಮೂರನೇ ಬಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್, ಈ ಬಾರಿ ರಾಜ್ಯಕ್ಕೆ ಒಂದಿಷ್ಟು ಕೊಡುಗೆ ನೀಡಲಾರರಾ ಎನ್ನುವ ಆಶಯವನ್ನು ರಾಜ್ಯದ ಜನರು ಹೊಂದಿದ್ದಾರೆ.

banglore
ಬಜೆಟ್​ ಮಂಡನೆ 2021

By

Published : Feb 1, 2021, 7:10 AM IST

ಬೆಂಗಳೂರು: ಹಣಕಾಸು ಸಚಿವೆಯಾಗಿ ಮೂರನೇ ಬಾರಿಗೆ ಕೇಂದ್ರ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಮೇಲೆ ಈ ಸಾರಿಯೂ ಸಾಕಷ್ಟು ನಿರೀಕ್ಷೆಯನ್ನು ರಾಜ್ಯದ ಜನ ಹೊಂದಿದ್ದು, ತಾವು ಪ್ರತಿನಿಧಿಸುವ ರಾಜ್ಯಕ್ಕೆ ಒಂದಿಷ್ಟು ಕೊಡುಗೆ ನೀಡಲಾರರಾ ಎನ್ನುವ ಆಶಯ ಹೊಂದಿದ್ದಾರೆ.

ಕಳೆದ ಎರಡು ಬಜೆಟ್​ಗಳಲ್ಲಿಯೂ ಕರ್ನಾಟಕವನ್ನು ಇತರೆ ರಾಜ್ಯಕ್ಕೆ ಸಮನಾಗಿ ಇಲ್ಲವೇ ಕೊಂಚ ಕಡಿಮೆಯಾಗಿಯೇ ಪರಿಗಣಿಸಿದ್ದ ಸಚಿವೆ ಈ ಸಾರಿ ಒಂದಿಷ್ಟು ಕೊಡುಗೆಗಳನ್ನು ನೀಡಬಹುದು ಎನ್ನುವ ನಿರೀಕ್ಷೆ ಹೊಂದಲಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿರುವ ಕಾರಣಕ್ಕೆ ಏನಾದರೂ ವಿಶೇಷವಾದದ್ದನ್ನು ನೀಡಬಹುದು ಎನ್ನುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ. ಸಂಸದರಾಗಿ 2016 ರಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಇದುವರೆಗೂ ರಾಜ್ಯಕ್ಕೆ ಹೇಳಿಕೊಳ್ಳುವಂತಹ ಕೊಡುಗೆ ನೀಡಿಲ್ಲ ಎನ್ನುವ ಆರೋಪವನ್ನೇ ಎದುರಿಸುತ್ತಾ ಬಂದಿದ್ದಾರೆ. ಸಂಸದರ ನಿಧಿ ಹೊರತುಪಡಿಸಿದರೆ ಕರ್ನಾಟಕಕ್ಕಾಗಿಯೇ ವಿಶೇಷ ಕೊಡುಗೆ ಅವರು ನೀಡಿದ್ದು ಎಲ್ಲಿಯೂ ಕಂಡು ಬಂದಿಲ್ಲ.

2019 ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಎರಡನೇ ಅವಧಿಗೆ ಎನ್​ಡಿಎ ಅಧಿಕಾರಕ್ಕೆ ಬಂದಾಗ ಹಣಕಾಸು ಸಚಿವೆ ಸ್ಥಾನ ನೀಡಲಾಯಿತು. ಇಂತಹ ಮಹತ್ವದ ಖಾತೆ ವಹಿಸಿಕೊಂಡ ದೇಶದ ಮೊದಲ ಮಹಿಳಾ ಸಚಿವೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಆದರೆ ಇವರ ಕೊಡುಗೆಗಳ ಬಗ್ಗೆ ಕರ್ನಾಟಕಕ್ಕೆ ಸಾಕಷ್ಟು ನಿರಾಸೆ ಇದೆ. ಈ ಸಾರಿ ಬಜೆಟ್ ಜನರ ಕಡೆಯ ನಿರೀಕ್ಷೆಯಾಗಿದೆ. ಏಕೆಂದರೆ ಯಾವುದೇ ಕೊಡುಗೆ ನೀಡದ ಹಿನ್ನೆಲೆ ಮತ್ತೊಂದು ಅವಧಿಗೆ ಕೇಂದ್ರದಿಂದ ಸೂಚಿಸಲ್ಪಟ್ಟಿದ್ದ ವೆಂಕಯ್ಯ ನಾಯ್ಡುರನ್ನು ರಾಜ್ಯದ ಜನ ಸಾಮಾಜಿಕ ಜಾಲತಾಣದಲ್ಲಿ ತೀವ್ರವಾಗಿ ಟೀಕಿಸಿ ಹಿಂದೆ ಸರಿಯುವಂತೆ ಮಾಡಿದ್ದರು. ಆದರೆ ಅವರ ಬದಲಾಗಿ ಪಕ್ಕದ ತಮಿಳಿನಾಡಿನಲ್ಲಿ ಹುಟ್ಟಿ, ವಿದೇಶದಲ್ಲಿ ವ್ಯಾಸಂಗ ಮಾಡಿ, 2014ರಲ್ಲಿ ಆಂಧ್ರಪ್ರದೇಶದಿಂದ ರಾಜ್ಯಸಭೆಗೆ ಆಯ್ಕೆಯಾಗಿ ನಂತರ ಕರ್ನಾಟಕದಿಂದ ಮರು ಆಯ್ಕೆಯಾದರು. ಆದರೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡುತ್ತಿಲ್ಲ ಎನ್ನುವ ಆರೋಪ ಮಾತ್ರ ಹಾಗೆಯೇ ಉಳಿದು ಹೋಗಿದೆ.

ಇದನ್ನೂ ಓದಿ:ಕೇಂದ್ರ ಬಜೆಟ್​: ವರ್ಕ್​​ ಫ್ರಂ​ ಹೋಮ್, ವೇತನ, ಆದಾಯ ತೆರಿಗೆದಾರರಿಗೆ ಭಾರೀ ಕೊಡುಗೆ ನಿರೀಕ್ಷೆ

ಪ್ರತಿಪಕ್ಷದ ಆರೋಪ

ಹಣಕಾಸು ಸಚಿವರಾಗಿ ಮುಂದುವರೆಯಲು ನಿರ್ಮಲಾ ಸೀತಾರಾಮನ್ ಅವರಿಗೆ ಯಾವ ನೈತಿಕತೆ ಇದೆ. ಕರ್ನಾಟಕ ರಾಜ್ಯದಿಂದ ನಿರ್ಮಲಾ ಸೀತಾರಾಮನ್ ರಾಜ್ಯಸಭಾ ಸದಸ್ಯರಾಗಿದ್ದಾರೆ, ಇವರಿಂದ ಕರ್ನಾಟಕ ರಾಜ್ಯಕ್ಕೆ ಕೊಡುಗೆ ಏನು ಎಂದು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ದೂರುತ್ತಿದ್ದಾರೆ. ಇದುವರೆಗೂ, ರಾಜ್ಯಕ್ಕೆ ಬರಬೇಕಾದ ತೆರಿಗೆಯ 13,672 ಕೋಟಿ ರೂಪಾಯಿ ಹಣ ವಾಪಾಸ್ ಬಂದಿಲ್ಲ. ರಾಜ್ಯದ ಪ್ರತಿಯೊಬ್ಬರು ಬೆವರು ಹರಿಸಿ ಸಂಪಾದಿಸಿದ ಹಣದಿಂದ ತೆರಿಗೆ ಕಟ್ಟಿದ್ದಾರೆ. ನಮ್ಮ ತೆರಿಗೆ ಹಣ ನಮಗೆ ವಾಪಾಸ್ ನೀಡಲು ಆಗುವುದಿಲ್ಲ. ಅಗತ್ಯವಿದ್ದರೆ ಸಾಲ ಪಡೆಯಿರಿ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಇನ್ನು ಬಿಜೆಪಿಯ 25 ಸಂಸದರಿಗೆ ರಾಜ್ಯದ ಮೇಲೆ ಅಭಿಮಾನವಿದ್ದರೆ, ವಿತ್ತ ಸಚಿವರು ಮತ್ತು ಪ್ರಧಾನಿಯವರ ಬಳಿ ಹೋರಾಟ ಮಾಡಿ ರಾಜ್ಯದ ಪಾಲು ತರಲಿ ಎಂದು ಆಗ್ರಹ ಮಾಡುತ್ತಿದ್ದಾರೆ.

ಕಳೆದ ಬಾರಿ ಭೀಕರ ಪ್ರವಾಹ ಸಂದರ್ಭದಲ್ಲಿ ಉಂಟಾಗಿದ್ದ ನಷ್ಟಕ್ಕೂ ಪರಿಹಾರ ಸರಿಯಾಗಿ ಬಿಡುಗಡೆ ಮಾಡಿಲ್ಲ, ಕೊರೊನಾ ಪರಿಸ್ಥಿತಿಯ ಬಗ್ಗೆ ದೇವರ ಇಚ್ಛೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಇಚ್ಛಾಶಕ್ತಿ ಇಲ್ಲದೇ ಇರುವವರು, ಕೈಲಾಗದೇ ಇರುವವರು ಈ ರೀತಿ ಬೇಜವಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಕಿಡಿಕಾರಿದ್ದಾರೆ. ನ್ಯಾಯಯುತವಾಗಿ ಕರ್ನಾಟಕ ರಾಜ್ಯಕ್ಕೆ ಬರಬೇಕಾದ ಪಾಲು ಇದೆ ಅದನ್ನು ನೀಡಬೇಕೆಂದು ಒತ್ತಾಯ ಮಾಡಿದ್ದಾರೆ. ಇದಕ್ಕೂ ಕೇಂದ್ರ ಸಚಿವರಿಂದ ಸ್ಪಂದನೆ ಸಿಕ್ಕಿಲ್ಲ. ಬಜೆಟ್​​ನಲ್ಲಿ ಒಂದಿಷ್ಟು ವಿಶೇಷ ಅನುದಾನ ಕಲ್ಪಿಸಿ ಒಂದಿಷ್ಟು ಬೇಸರಕ್ಕೆ ತೇಪೆ ಹಾಕುವ ಕಾರ್ಯ ಮಾಡಬಹುದು ಎನ್ನುವ ನಿರೀಕ್ಷೆ ಹೊಂದಲಾಗಿದೆ.

ಕೊರೊನಾದಿಂದಾಗಿ ದೇಶ ಆರ್ಥಿಕವಾಗಿ ಹಿಂದುಳಿದಿದೆ. ಹೀಗಿರುವಾಗಲೇ ಅತ್ತ ಕೃಷಿ ಬಿಲ್ ವಿರೋಧಿಸಿ ದೇಶಾದ್ಯಂತ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯಗಳಿಗೆ ಜಿಎಸ್​ಟಿ ಮರುಪಾವತಿ ಮಾಡಲಾಗದೇ ಕೇಂದ್ರ ಸರ್ಕಾರ ಹೈರಾಣಾಗಿದೆ. ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಳೆದು ತೂಗಿ ಬಜೆಟ್ ಮಂಡಿಸಬೇಕಾದ ಸ್ಥಿತಿ ಇದೆ. ಜನರಿಗೆ ಆಸೆ ಹುಟ್ಟಿಸುವ ಬಜೆಟ್ ಮಂಡಿಸಲು ಯಾವುದೇ ಚುನಾವಣೆ ಹತ್ತಿರದಲ್ಲಿ ಇಲ್ಲ. ಇದರಿಂದ ಅಭಿವೃದ್ಧಿಗೆ ಒತ್ತು ಕೊಡುವ ಬಜೆಟ್ ಮಂಡನೆಯಾಗುವ ನಿರೀಕ್ಷೆ ಇದೆ. ರೈಲ್ವೆ, ಮೂಲಭೂತ ಸೌಕರ್ಯ, ನಿರಾವರಿ, ಸಾರಿಗೆ ಸೇರಿದಂತೆ ಹಲವು ವಿಭಾಗಗಳಲ್ಲಿ ಒಂದಿಷ್ಟು ಹೆಚ್ಚಿನ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.

ABOUT THE AUTHOR

...view details