ಬೆಂಗಳೂರು :ರಾಜ್ಯಾದ್ಯಂತ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 10 ಸೆಂಟ್ಸ್‌ವರೆಗಿನ ಜಾಗವನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ರಘುಪತಿ ಭಟ್ ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವರ ಪರ ಉತ್ತರಿಸಿದ ಹೆಬ್ಬಾರ್, ಮುಂದಿನ ಮಂಗಳವಾರ ಅಧಿಕಾರಿಗಳ ಸಭೆ ಕರೆದು ಏಕರೂಪ ನೀತಿ ಜಾರಿ ಮಾಡುವುದರಿಂದ ಈಗಿರುವ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದರು.
ಉಡುಪಿ, ಮಂಗಳೂರು, ಶಿವಮೊಗ್ಗಕ್ಕೆ ಮಾತ್ರ ಅನ್ವಯವಾಗದಂತೆ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿ ಜಾರಿ ಮಾಡಲು ಸಚಿವರಿಗೆ ನಿರ್ದೇಶನ ನೀಡಬೇಕೆಂದು ಶಾಸಕ ರಮೇಶ್‍ಕುಮಾರ್ ಅವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸ್ಪೀಕರ್, ಈ ಸಮಸ್ಯೆ ರಾಜ್ಯಾದ್ಯಂತ ಇದೆ ಎಂಬುದನ್ನು ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಇಂತಹ ತಾರತಮ್ಯ ಬೇಡ. ಅಧಿಕಾರ ವಿಕೇಂದ್ರೀಕರಣ ಉದ್ದೇಶವೇ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದಾಗಿದೆ. ಹೀಗಾಗಿ, ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.
ಈ ವೇಳೆ ಉತ್ತರ ನೀಡಿದ ಸಚಿವರು, ಈಗಾಗಲೇ ಇಂದು ಬೆಳಗ್ಗೆ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಉಡುಪಿಯಲ್ಲಿ ಇದರ ಸಮಸ್ಯೆ ಇದ್ದರೆ ತಕ್ಷಣವೇ ಪರಿಹರಿಸಲಾಗುವುದು. ಅಲ್ಲದೆ ರಾಜ್ಯದ ಯಾವ ಯಾವ ಭಾಗಗಳಲ್ಲಿ ಸಮಸ್ಯೆ ಇವೆಯೋ ಅದನ್ನು ಕಾಲಮಿತಿಯೊಳಗೆ ಪರಿಹರಿಸುತ್ತೇವೆ. ಶಾಸಕರ ಕಳಕಳಿ ನನಗೆ ಅರ್ಥವಾಗಿದೆ ಎಂದರು.