ಕರ್ನಾಟಕ

karnataka

ETV Bharat / state

ಶಿಕ್ಷಣ ಹೆಚ್ಚಾದರೂ ದುರದೃಷ್ಟವಶಾತ್ ಅಪರಾಧ ಪ್ರಕರಣ ಹೆಚ್ಚುತ್ತಿದೆ: ಬೇಸರ ಹೊರ ಹಾಕಿದ ಆರಗ ಜ್ಞಾನೇಂದ್ರ

ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಏರಿಕೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಪೊಲೀಸ್ ಠಾಣೆಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ - ಗೃಹ ಸಚಿವ ಆರಗ ಜ್ಞಾನೇಂದ್ರ.

ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : Feb 23, 2023, 3:12 PM IST

Updated : Feb 23, 2023, 3:29 PM IST

ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಶಿಕ್ಷಣ ಹೆಚ್ಚಾದರೆ ಅಪರಾಧ ಕಡಿಮೆಯಾಗಬೇಕಿತ್ತು. ಆದರೆ, ದುರಾದೃಷ್ಟವಶಾತ್ ಅಪರಾಧ ಪ್ರಕರಣ ಹೆಚ್ಚಾಗುತ್ತಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನಸಭೆಯಲ್ಲಿ ಇಂದು ಬೇಸರ ಹೊರ ಹಾಕಿದರು. ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಪುಟ್ಟರಂಗಶೆಟ್ಟಿ ಪರವಾಗಿ ನರೇಂದ್ರ ಅವರು ಕೇಳಿದ ಪ್ರಶ್ನೆ ಸಂದರ್ಭದಲ್ಲಿ ಮಾತನಾಡಿದ ಸಚಿವರು, ರಾಜ್ಯದಲ್ಲಿ ಅಪರಾಧಗಳ ಪ್ರಮಾಣ ಏರಿಕೆಯಾಗುತ್ತಿದೆ. ಅದಕ್ಕೆ ತಕ್ಕಂತೆ ಪೊಲೀಸ್ ಠಾಣೆಗಳನ್ನು ಸಹ ನಿರ್ಮಾಣ ಮಾಡಲಾಗುತ್ತಿದೆ. ಶಿಕ್ಷಣದ ಪರಿಣಾಮ ಅಪರಾಧ ಕಡಿಮೆ ಆಗಬೇಕು. ಆದರೆ, ಅದು ಉಲ್ಟಾ ಆಗುತ್ತಿದೆ. ಅಪರಾಧ ಹೆಚ್ಚಾಗುತ್ತಿದೆ ಎಂದರು.

ಗೃಹ ಸಚಿವರ ಬೆಂಬಲಕ್ಕೆ ನಿಂತ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಹೌದು, ನಮ್ಮ ಶಿಕ್ಷಣದ ಪ್ರಭಾವ ಇದು ಎಂದು ಬೇಸರ ಹೊರ ಹಾಕಿದರು. ಅಪರಾಧ ಹೆಚ್ಚಾದರೆ ಕಾರಾಗೃಹ ಸಹ ಜಾಸ್ತಿ ಮಾಡಿ ಎಂದು ಇದೇ ಸಂದರ್ಭದಲ್ಲಿ ಸ್ಪೀಕರ್ ಸಲಹೆ ನೀಡಿದರು. ಈಗಾಗಲೇ ಶಿವಮೊಗ್ಗದಲ್ಲಿ ಕಾರಾಗೃಹ ಮಾಡ್ತಾ ಇದ್ದೇವೆ ಎಂದಾಗ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಎಲ್ಲಾ ತಗೊಂಡು ಹೋಗಿ, ಶಿವಮೊಗ್ಗಕ್ಕೆ ತೆಗೆದುಕೊಂಡು ಹೋದ್ರೆ ಹೇಗೆ.?. ಎಲ್ಲಾ ಕಡೆ ಮಾಡಬೇಕಲ್ವೇ.? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಈಗಾಗಲೇ ಎಫ್​ಎಸ್​ಎಲ್​ ತಜ್ಞರನ್ನು ನೇಮಕ ಮಾಡಲಾಗುತ್ತಿದೆ. ನೇಮಕಗೊಂಡವರಿಗೆ ಗುಜರಾತ್​​ನ ಎಫ್​ಎಸ್​​ಎಲ್ ವಿಶ್ವವಿದ್ಯಾಲಯದಿಂದ ತರಬೇತಿ ನೀಡಲಾಗಿದೆ. ಇನ್ಮುಂದೆ ತಾಲೂಕಿಗೆ ಒಬ್ಬರು ಎಫ್​ಎಸ್​ಎಲ್​ ತಜ್ಞರನ್ನು ನೇಮಕ ಮಾಡಲಾಗುವುದು. ಸಾಕ್ಷ್ಯಾಧಾರದ ಕೊರತೆಯಿಂದ ಪ್ರಕರಣಗಳು ವಜಾಗೊಳ್ಳುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಂಡಿದ್ದೇವೆ ಎಂದು ಸಚಿವರು ಸದನಕ್ಕೆ ತಿಳಿಸಿದರು.

ಧಾರವಾಡದಲ್ಲಿ ವಿವಿ, ಬಳ್ಳಾರಿಯಲ್ಲಿ ಕೇಂದ್ರ ಸ್ಥಾಪನೆ:ಜೊತೆಗೆ ಧಾರವಾಡದಲ್ಲಿ ಎಫ್​ಎಸ್​​ಎಲ್ ವಿಶ್ವವಿದ್ಯಾಲಯ ಮತ್ತು ಬಳ್ಳಾರಿಯಲ್ಲಿ ಎಫ್​ಎಸ್​​ಎಲ್ ಕೇಂದ್ರ ಸ್ಥಾಪನೆಯಾಗುತ್ತಿದೆ. ಮುಂದೆ ತುಮಕೂರು ಮತ್ತು ಶಿವಮೊಗ್ಗದಲ್ಲೂ ಎಫ್​ಎಸ್​​ಎಲ್ ಕೇಂದ್ರ ಸ್ಥಾಪನೆಯಾಗಲಿದೆ ಎಂದು ಹೇಳಿದರು. ರಾಜ್ಯದಲ್ಲಿನ ಅಪರಾಧ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ದೊರೆಯುವಂತಾಗಲು 206 ಮಂದಿ ಕ್ರೈಂ ಸೀನ್ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಹೊಸದಾಗಿ ನೇಮಕವಾಗುವ ಈ ಅಧಿಕಾರಿಗಳಿಗೆ ತೆಲಂಗಾಣ ಮತ್ತು ಗುಜರಾತಿನಲ್ಲಿ ತರಬೇತಿ ನೀಡಲಾಗುವುದು. ಇದರಿಂದ ಅಪರಾಧ ಪ್ರಕರಣಗಳನ್ನು ವೈಜ್ಞಾನಿಕವಾಗಿ ಭೇದಿಸಿ ತ್ವರಿತ ಶಿಕ್ಷೆ ನೀಡುವಂತಾಗಲು ಅನುಕೂಲವಾಗಲಿದೆ ಎಂದರು.

ಹುಬ್ಬಳ್ಳಿಯಲ್ಲಿ ಪ್ರಯೋಗಾಲಯ ಕಾರ್ಯಾರಂಭ:ರಾಜ್ಯದಲ್ಲಿ ಹುಬ್ಬಳ್ಳಿಯಲ್ಲಿ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ತೆರೆಯಲಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಬಜೆಟ್​​ನಲ್ಲಿ ತುಮಕೂರು ಮತ್ತು ಶಿವಮೊಗ್ಗದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಎಫ್ಎಸ್ಎಲ್ ಕೇಂದ್ರ ತೆರೆಯಲಾಗುತ್ತದೆ. ಈ ಮೊದಲು ನಾವು ಹೈದರಬಾದ್​ಗೆ ತೆರಳಬೇಕಿತ್ತು. ಅತ್ಯಾಚಾರ, ಕೊಲೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚಲಾಗುತ್ತದೆ ಎಂದು ವಿವರಿಸಿದರು.

ಸೆಂಟ್ರಲ್ ಜೈಲ್:ಇತಿಹಾಸದಲ್ಲೇ ಮೊದಲ ಬಾರಿಗೆ ಗೃಹ ಇಲಾಖೆಗೆ ಯಾವುದೇ ಸರ್ಕಾರಗಳು ಕೊಡದಷ್ಟು ಅನುದಾನವನ್ನು ನಮ್ಮ ಸರ್ಕಾರ ಕೊಟ್ಟಿದೆ. 200 ಕೋಟಿ ರೂ. ವೆಚ್ಚದಲ್ಲಿ 117 ಪೊಲೀಸ್ ಠಾಣೆ ತೆರೆಯಲಾಗಿದೆ. ಪೊಲೀಸರಿಗೆ ನಿವೇಶನ, ವಸತಿ ಸೇರಿದಂತೆ ಇತ್ಯಾದಿ ಸೌಲಭ್ಯ ಒದಗಿಸಲಾಗಿದೆ. ಶಿವಮೊಗ್ಗದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಸೆಂಟ್ರಲ್ ಜೈಲ್ ನಿರ್ಮಿಸಲಾಗುತ್ತಿದೆ. 8 ಸೆಂಟ್ರಲ್ ಜೈಲಿರುವ ಕಡೆ ಹೆಚ್ಚುವರಿಯಾಗಿ ಶೆಲ್​​ಗಳನ್ನು ನಿರ್ಮಿಸಲಾಗುವುದು ಎಂದರು.

ಇದನ್ನೂ ಓದಿ :ಅನುದಾನಿತ ಕಾಲೇಜು ಉಪನ್ಯಾಸಕರಿಗೆ ಎನ್​ಪಿಎಸ್​​ ಪಿಂಚಣಿ ಕುರಿತು ನ್ಯಾಯಸಮ್ಮತ ತೀರ್ಮಾನ: ಸಿಎಂ ಭರವಸೆ

Last Updated : Feb 23, 2023, 3:29 PM IST

ABOUT THE AUTHOR

...view details