ಬೆಂಗಳೂರು: ಕೊರೊನಾ 2ನೇ ಅಲೆ ಇಡೀ ಕರುನಾಡನ್ನು ಹಿಂಡಿ ಹಿಪ್ಪೆಯಾಗಿಸಿದೆ. ಕೊರೊನಾ ವೇಗಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಒಂದು ತಿಂಗಳಿಗೂ ಹೆಚ್ಚು ಕಾಲ ಸರ್ಕಾರ ಲಾಕ್‌ಡೌನ್ ಹೇರಿದೆ. ಇದರಿಂದಾಗಿ ಆರ್ಥಿಕ ಚಟುವಟಿಕೆ ಸ್ತಬ್ಧಗೊಂಡು ರಾಜ್ಯದಲ್ಲಿ ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಏರಿಕೆಯಾಗಿದೆ.
ಲಾಕ್‌ಡೌನ್ ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ಹಿಂದೆಂದೂ ಕಾಣದ ಹೊಡೆತ ನೀಡಿದೆ. ಮೊದಲ ಲಾಕ್‌ಡೌನ್ ಹೊಡೆತದಿಂದ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದ ವಿವಿಧ ವಲಯಗಳಿಗೆ ಮತ್ತೊಂದು ನಿರ್ಬಂಧ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಎಷ್ಟಿದೆ ರಾಜ್ಯದ ನಿರುದ್ಯೋಗ ಪ್ರಮಾಣ?: ದೇಶದ ಪ್ರತಿಷ್ಠಿತ ಸೆಂಟರ್ ಆಫ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (CMIE) ಸಂಸ್ಥೆ ರಾಜ್ಯದಲ್ಲಿನ ನಿರುದ್ಯೋಗದ ವಸ್ತುಸ್ಥಿತಿಯನ್ನು ಮುಂದಿಟ್ಟಿದೆ.
ಈ ಬಾರಿಯ ಒಂದು ತಿಂಗಳ ಲಾಕ್ಡೌನ್ನಿಂದ ರಾಜ್ಯದ ಬಹುತೇಕ ಆರ್ಥಿಕ ಚಟುವಟಿಕೆಗಳು ಸ್ತಬ್ದವಾಗಿದೆ. ಮೇ ತಿಂಗಳಿನಿಂದ ಕರುನಾಡು ಲಾಕ್‌ಡೌನ್ ಎಂಬ ಆರ್ಥಿಕ ವಿಪತ್ತನ್ನು ಎದುರಿಸುತ್ತಿದೆ. ಇದರ ನೇರ ಹೊಡೆತ ಬಿದ್ದಿರುವುದು ಅಸಂಘಟಿತ ವಲಯಗಳ ಮೇಲೆ. ಮೇ ತಿಂಗಳ ಲಾಕ್‌ಡೌನ್ ರಾಜ್ಯಕ್ಕೆ ಯಾವ ರೀತಿ ಹೊಡೆತ ನೀಡಿದೆ ಎಂಬುದಕ್ಕೆ ಸಿಎಂಐಇ ದತ್ತಾಂಶ ತೋರಿಸಿರುವ ನಿರುದ್ಯೋಗ ಪ್ರಮಾಣ ಕೈಗನ್ನಡಿಯಾಗಿದೆ.
ಮೇ ತಿಂಗಳಲ್ಲಿ ಕರುನಾಡ ನಿರುದ್ಯೋಗ ಪ್ರಮಾಣ ಶೇ5.3ಕ್ಕೆ ಏರಿಕೆಯಾಗಿದೆ. ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ 2 ರಷ್ಟು ಇತ್ತು. ಇದೀಗ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಹಾಕಿರುವ ಹಿನ್ನೆಲೆ ನಿರುದ್ಯೋಗ ಪ್ರಮಾಣ ಶೇ5.3ಕ್ಕೆ ಏರಿಕೆಯಾಗಿದೆ. ಕಳೆದ ಬಾರಿ ಹೇರಲಾದ ರಾಷ್ಟ್ರೀಯ ಲಾಕ್‌ಡೌನ್ ನಿಂದ ಚೇತರಿಸಿಕೊಳ್ಳುತ್ತಿದ್ದ ನಿರುದ್ಯೋಗ ಪ್ರಮಾಣಕ್ಕೆ ಮತ್ತೊಂದು ಲಾಕ್‌ಡೌನ್ ನಿರೀಕ್ಷೆಯಂತೆ ಮತ್ತೆ ಹೆಚ್ಚಿಸುವಂತೆ ಮಾಡಿದೆ.
ಕಳೆದ ವರ್ಷದ ಲಾಕ್ಡೌನ್ನಿಂದ ಏಪ್ರಿಲ್ ತಿಂಗಳಲ್ಲಿ ರಾಜ್ಯದ ನಿರುದ್ಯೋಗ ಪ್ರಮಾಣ ಶೇ29.8ಕ್ಕೆ ದಾಖಲೆ ಏರಿಕೆ ಕಂಡಿತ್ತು. ಅದೇ ಮೇ ತಿಂಗಳಲ್ಲಿ ಅಲ್ಪ ಮಟ್ಟಿನ ಲಾಕ್‌ಡೌನ್ ಸಡಿಲಿಕೆಯಾದ ಹಿನ್ನೆಲೆ ನಿರುದ್ಯೋಗ ಪ್ರಮಾಣ ಶೇ20.4ಕ್ಕೆ ಅಲ್ಪ ಇಳಿಕೆ ಕಂಡಿತು. ಜೂನ್ ತಿಂಗಳಲ್ಲಿ ಅನ್ಲಾಕ್ ಪ್ರಕ್ರಿಯೆ ಆರಂಭವಾದ ಕಾರಣ ನಿರುದ್ಯೋಗ ಪ್ರಮಾಣದಲ್ಲಿ ಚೇತರಿಕೆ ಕಾಣತೊಡಗಿತು.
ಕಳೆದ ವರ್ಷ ಅನ್ಲಾಕ್ ಆದ ಬಳಿಕ ರಾಜ್ಯದ ನಿರುದ್ಯೋಗ ಪ್ರಮಾಣ ಅಕ್ಟೋಬರ್ನಲ್ಲಿ ಶೇ1.6ರಷ್ಟು ಇಳಿಕೆಯಾಯಿತು. ಬಳಿಕ ನವಂಬರ್ ಶೇ1.9, ಡಿಸೆಂಬರ್ ಶೇ1.4, ಜನವರಿ ಶೇ3.3, ಫೆಬ್ರವರಿ ಶೇ2.5, ಮಾರ್ಚ್ ಶೇ1.2 ಮತ್ತು ಏಪ್ರಿಲ್ ಶೇ,2ರಲ್ಲಿತ್ತು. ಇದೀಗ ಲಾಕ್‌ಡೌನ್ ಹೇರಿರುವ ಕಾರಣ ಮೇ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ 5.3 ಗೆ ಏರಿಕೆ ಕಂಡಿದೆ.