ಕರ್ನಾಟಕ

karnataka

ಚುನಾವಣ ಕಣದಲ್ಲಿ ಝಣ ಝಣ ಕಾಂಚಾಣ.. ನಗದು, ಮದ್ಯ ಸೇರಿ ವಶಕ್ಕೆ ಪಡೆದ ವಸ್ತುಗಳ ಮೊತ್ತ 187 ಕೋಟಿ!

By

Published : Apr 19, 2023, 9:58 AM IST

ಮಾ.29 ರಿಂದ ಏ.17 ರ ವರೆಗೆ ಚುನಾವಣಾ ಜಾಗೃತ ತಂಡಗಳು ವಶಪಡಿಸಿಕೊಂಡಿರುವ ಒಟ್ಟು ನಗದು, ಮದ್ಯ, ಮಾದಕ ದ್ರವ್ಯಗಳು, ಬೆಲೆ ಬಾಳುವ ಲೋಹಗಳು ಮತ್ತು ಉಚಿತ ಉಡುಗೊರೆಗಳ ಮೊತ್ತ 187.17 ಕೋಟಿ ರೂ. ತಲುಪಿದೆ.

Undocumented money
ಪ್ರಾತಿನಿಧಿಕ ಚಿತ್ರ

ಬೆಂಗಳೂರು: 2023ರ ವಿಧಾನಸಭೆ ಚುನಾವಣೆ ಪೂರ್ವ ಕುರುಡು ಕಾಂಚಾಣದ ಕುಣಿತ ಜೋರಾಗಿದೆ. ಕಳೆದ ಬಾರಿ ಒಟ್ಟು ಜಪ್ತಿ ಮಾಡಲಾದ ನಗದು, ಮದ್ಯ, ಉಡುಗೊರೆಗಳ ಮೊತ್ತವನ್ನು ಮೀರಿ ಈ ಬಾರಿ 20 ದಿನಗಳಲ್ಲೇ ವಶಪಡಿಸಿಕೊಳ್ಳಲಾಗಿದೆ.

ಮಾ.29 ರಿಂದ ಏ.17 ರ ವರೆಗೆ ಚುನಾವಣಾ ಜಾಗೃತ ತಂಡಗಳು ವಶಪಡಿಸಿಕೊಂಡಿರುವ ಒಟ್ಟು ನಗದು, ಮದ್ಯ, ಮಾದಕ ದ್ರವ್ಯಗಳು, ಬೆಲೆ ಬಾಳುವ ಲೋಹಗಳು ಮತ್ತು ಉಚಿತ ಉಡುಗೊರೆಗಳ ಮೊತ್ತ 187.17 ಕೋಟಿ ರೂ. ತಲುಪಿದೆ. 2018ರ ಚುನಾವಣೆಯಲ್ಲಿ ಒಟ್ಟು ಜಪ್ತಿ ಮಾಡಲಾದ ಮದ್ಯ, ನಗದು, ಉಡುಗೊರೆಗಳ ಮೊತ್ತ 185.74 ಕೋಟಿ ರೂ. ಆಗಿತ್ತು. ಅಂದರೆ 2023ರ ಚುನಾವಣೆಯಲ್ಲಿ ಏ.17ರ ವರೆಗೆ ವಶಪಡೆದ ಒಟ್ಟು ಸಂಚಿತ ಮೌಲ್ಯ 2018ರ ಚುನಾವಣೆಯ ಮೂರು ಪಟ್ಟು ಹೆಚ್ಚಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.

ಜಪ್ತಿ ಮಾಡಲಾದ ವಸ್ತುಗಳ ವಿವರ: ಈವರೆಗೆ ಒಟ್ಟು 75.17 ಕೋಟಿ ರೂ. ನಗದು ವಶಕ್ಕೆ ಪಡೆಯಲಾಗಿದೆ. ಉಚಿತ ಕೊಡುಗೆ ರೂಪದಲ್ಲಿ 19.05 ಕೋಟಿ ರೂ. ಜಪ್ತಿ ಮಾಡಲಾಗಿದೆ. ಒಟ್ಟು 40.93 ಕೋಟಿ ಮೌಲ್ಯದ 9,82,756 ಲೀಟರ್ ಮದ್ಯ, 15.2 ಕೋಟಿ ರೂ. ಮೊತ್ತದ 908 ಕೆ.ಜಿ. ಡ್ರಗ್ಸ್, 33.61 ಕೋಟಿ ಮೌಲ್ಯದ 75.30 ಕೆ‌.ಜಿ. ಬಂಗಾರ ಹಾಗೂ 3.21 ಕೋಟಿ ಮೊತ್ತದ 454.707 ಕೆ.ಜಿ. ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.

1,550ಕ್ಕೂ ಹೆಚ್ಚು ಎಫ್​ಐಆರ್​:ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡ ಮತ್ತು ಪೊಲೀಸ್ ಅಧಿಕಾರಿಗಳು 1,550 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 69,104 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದೆ. 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು 20 ಶಸ್ತ್ರಾಸ್ತ್ರಗಳ ಪರವಾನಿಗೆ ರದ್ದು ಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸಿಆರ್‌ಪಿಸಿ ಕಾಯ್ದೆಯಡಿ 4,253 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 6,468 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದೆ. ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ 10,817 ಜಾಮೀನು ರಹಿತ ವಾರಂಟ್‌ಗಳನ್ನು ಜಾರಿಗೊಳಿಸಲಾಗಿದೆ. ಅಬಕಾರಿ ಇಲಾಖೆ 1,984 ಗಂಭೀರ ಪ್ರಕರಣ, 1,494 ಮದ್ಯದ ಪರವಾನಿಗೆ ಉಲ್ಲಂಘಿಸಿದ ಪ್ರಕರಣ, 69 ಎನ್‌ಡಿಪಿಎಸ್ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ 15 (ಎ) ಅನ್ವಯ ಒಟ್ಟು 10,193 ಪ್ರಕರಣಗಳನ್ನು ದಾಖಲಿಸಿದೆ ಮತ್ತು 1,338 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆ ಬೆಂಗಳೂರು ನಗರ ಜಿಲ್ಲೆಯ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ರೂ. 67,54,049 ಮೌಲ್ಯದ 1,448 ಕೆ.ಜಿ ಬಂಗಾರ, ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ರೂ. 55,83,905 ಮೌಲ್ಯದ 1.457 ಕೆ.ಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ವಿಚಕ್ಷಣ ದಳ ಶಾಂತಿನಗರ ವಿಧಾನಸಭೆ ಕ್ಷೇತ್ರದಲ್ಲಿ ರೂ. 4,79,64,024 ಮೌಲ್ಯದ 7.999 ಕೆ.ಜಿ ಬಂಗಾರವನ್ನು ವಶಪಡಿಸಿಕೊಂಡಿದೆ. ಸ್ಥಿರ ಕಣ್ಗಾವಲು ತಂಡ ಬೆಂಗಳೂರು ಜಿಲ್ಲೆಯಲ್ಲಿ ರೂ. 30,00,000 ನಗದು, ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ರೂ. 1.97 ಕೋಟಿ ನಗದು ಹಾಗೂ ಮಹಾದೇವಪುರ ವಿಧಾನಸಭೆ ಕ್ಷೇತ್ರದಲ್ಲಿ ರೂ. 26,62,521 ನಗದು ವಶಪಡಿಸಿಕೊಂಡಿರುವ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳು ವಿವರಿಸಿದ್ದಾರೆ.

ಇದನ್ನೂ ಓದಿ:ವಿಧಾನಸಭಾ ಚುನಾವಣೆ: ಬೆಂಗಳೂರಲ್ಲಿ ದಾಖಲೆಯಿಲ್ಲದ ₹ 18 ಲಕ್ಷ ರೂ ಜಪ್ತಿ

ABOUT THE AUTHOR

...view details