ಬೆಂಗಳೂರು:ಎಚ್ಎಎಲ್ ಓಲ್ಡ್ ಏರ್ಪೋರ್ಟ್ ರಸ್ತೆಯ ಸುರಂಜನ್ ದಾಸ್ ಜಂಕ್ಷನ್ ಸಮೀಪದ ಅಂಡರ್ಪಾಸ್ ಅನ್ನು ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಇಂದು ಲೋಕಾರ್ಪಣೆ ಮಾಡಿದರು. ಈ ಮೂಲಕ ಕೆಳಸೇತುವೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತ ಅವಕಾಶ ದೊರೆಯಿತು.
₹19 ಕೋಟಿ ವೆಚ್ಚ:ಕೆ.ಆರ್.ಪುರ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಹಲವು ವರ್ಷಗಳಿಂದ ಸಂಚಾರ ದಟ್ಟಣೆಯಿಂದ ಸಮಸ್ಯೆ ಎದುರಿಸುತ್ತಿದ್ದ ಹೆಚ್ಎಎಲ್ನಿಂದ ವೈಟ್ ಫೀಲ್ಡ್ ಹೋಪ್ ಫಾರಂನವರೆಗಿನ 270 ಮೀ. ಉದ್ದದ ಕೆಳ ಸೇತುವೆಯನ್ನು 19 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.
''ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಪ್ರತಿದಿನ ಐದು ಸಾವಿರ ಹೊಸ ವಾಹನಗಳು ರಸ್ತೆಗೆ ಬರುತ್ತಿವೆೆ. ಆದರೆ, ರಸ್ತೆಗಳು ಮಾತ್ರ ಹಳೆಯದಾಗಿವೆ. ರಸ್ತೆಗಳು ಕಿರಿದಾಗಿರುವುದರಿಂದ ವಾಹನ ಸಂಚಾರರು ಪರದಾಡುವಂತಾಗಿತ್ತು. ಈ ರಸ್ತೆ ನಿರ್ಮಾಣದಿಂದ ವೈಟ್ ಫೀಲ್ಡ್ನಿಂದ ಎಂಜಿ ರಸ್ತೆವರೆಗೆ ಸಂಚಾರ ಸಲೀಸಾಗಿದೆ'' ಎಂದು ಸಿಎಂ ಹೇಳಿದರು.
''ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದು, ವಾಹನ ದಟ್ಟಣೆ ಸಂಪೂರ್ಣ ನಿಯಂತ್ರಣ ಮಾಡುವ ಉದ್ದೇಶದಿಂದ ಅಮೃತ ನಗರೋತ್ಥಾನದಡಿ 11 ಹೊಸ ಮೇಲ್ಸೇತುವೆಗಳಿಗೆ ಅನುಮೋದನೆ ನೀಡಲಾಗಿದೆ. 11 ಮೇಲ್ಸೇತುವೆಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸುತ್ತೇನೆ'' ಎಂದರು.
''ಮೆಟ್ರೋ ಮೂರನೇ ಫೇಸ್ಗೆ ಅನುಮೋದನೆ ಕೊಟ್ಟಿದ್ದು, ಕಾಮಗಾರಿ ವೇಗವಾಗಿ ಆಗುತ್ತಿದೆ. ರಾಜಕಾಲುವೆಗಳ ಒತ್ತುವರಿ ತೆರವು ಮಾಡುತ್ತಿದ್ದು, ರಾಜಕಾಲುವೆಗಳ ನಿರ್ಮಾಣಕ್ಕೆ ಎರಡು ಸಾವಿರ ಕೋಟಿ ರೂಪಾಯಿ ನೀಡಲಾಗಿದೆ'' ಎಂದು ತಿಳಿಸಿದರು.
ಕೆ.ಆರ್. ಪುರಂ ಕ್ಷೇತ್ರಕ್ಕೆ 210 ಕೋಟಿ:''ಸಿಎಂ ಬೊಮ್ಮಾಯಿ ನಮ್ಮ ಕೆ.ಆರ್.ಪುರಂ ಕ್ಷೇತ್ರಕ್ಕೆ 210 ಕೋಟಿ ರೂ. ಕೊಟ್ಟಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಅದೇ ರೀತಿ ಮಳೆಯಿಂದ ಆಗುತ್ತಿದ್ದ ಹಾನಿ ತಡೆಗಟ್ಟಲು ಕಾಮಗಾರಿ ಕೈಗೊಳ್ಳಲಾಗಿದೆ'' ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಹೇಳಿದರು.
''ಕೆ.ಆರ್.ಪುರ, ಟಿಸಿ ಪಾಳ್ಯ ಗೇಟ್, ಭಟ್ಟರಹಳ್ಳಿ ಜಂಕ್ಷನ್ ನಲ್ಲಿ ಪ್ರತಿದಿನ ಸಾಕಷ್ಟು ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಈ ಸಮಸ್ಯೆ ತಪ್ಪಿಸಲು ಟಿನ್ ಫ್ಯಾಕ್ಟರಿಯಿಂದ ಮೇಡಹಳ್ಳಿವರೆಗೂ ಎಲಿವೇಟೆಡ್ ಕಾರಿಡರ್ ರಸ್ತೆ ಮಾಡಿಕೊಡಬೇಕೆಂದು ಮನವಿ ಮಾಡುತ್ತೇನೆ'' ಎಂದರು.
''ಮಾರತ್ಹಳ್ಳಿ ಕಡೆಗೆ ತೆರಳುವ ವಾಹನ ಸವಾರರಿಗೆ ಸುರಂಜನ್ ದಾಸ್ ಜಂಕ್ಷನ್ ವರದಾನವಾಗಿದೆ. ವೈಟ್ಫೀಲ್ಡ್ ಮತ್ತು ದೊಮ್ಮಲೂರು ಮಾರ್ಗದಿಂದ ಬರುವ ವಾಹನಗಳು ಸಿಗ್ನಲ್ಗಾಗಿ ಅಥವಾ ಓಲ್ಡ್ ಮದ್ರಾಸ್ ರಸ್ತೆಯ ಟ್ರಾಫಿಕ್ನಿಂದ ಕಾಯಬೇಕಿಲ್ಲ. ಈ ವಾಹನಗಳು ಸುಲಭವಾಗಿ ಎಚ್ಎಎಲ್ ಮುಖ್ಯದ್ವಾರದ ಕಡೆಗೆ ತೆರಳಬಹುದಾಗಿದೆ. ಮಾರತ್ತಹಳ್ಳಿಯಿಂದ ಬರುವ ವಾಹನಗಳಿಗೆ ಸುರಂಜನ್ ದಾಸ್ ರಸ್ತೆಗೆ ತೆರಳಲು ಮುಕ್ತ ಬಲ ತಿರುವು ಕಲ್ಪಿಸಲಾಗಿದೆ'' ಎಂದು ಸಚಿವ ಬೈರತಿ ಬಸವರಾಜ ತಿಳಿಸಿದರು.
ಇದನ್ನೂ ಓದಿ:ನಾಳೆಯಿಂದ ಅಧಿವೇಶನ: ಸದನಕ್ಕೆ ಹಾಜರಾಗಲು ಶಾಸಕರಿಗೆ ಸಭಾಧ್ಯಕ್ಷ ಕಾಗೇರಿ ಮನವಿ