ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ: ಸುನೀಲ್ ಕುಮಾರ್ ವ್ಯಂಗ್ಯ - ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ವಿದ್ಯುತ್ ಉಚಿತ ನೀಡುವುದಾಗಿ ಕಾಂಗ್ರೆಸ್ ನೀಡಿದ ಭರವಸೆಯನ್ನು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. 'ಭರವಸೆ ಉಚಿತ, ಸಾಲ ಖಚಿತ' ಎಂಬುದು ಸಿದ್ದರಾಮಯ್ಯನವರ ನೀತಿ ಎಂದು ಅವರು ಟೀಕಿಸಿದ್ದಾರೆ.

ಸಿದ್ದರಾಮಯ್ಯ ಆಡಳಿತದಲ್ಲಿ ಭರವಸೆ ಉಚಿತ, ಸಾಲ ಖಚಿತ : ಸುನಿಲ್ ಕುಮಾರ್ ವ್ಯಂಗ್ಯ
Under Siddaramaiah administration, promise is free debt is guaranteed

By

Published : Jan 15, 2023, 4:02 PM IST

ಬೆಂಗಳೂರು: ಸಿದ್ದರಾಮಯ್ಯನವರ ಆಡಳಿತ ಎಂದರೆ 'ಭರವಸೆ ಉಚಿತ, ಸಾಲ ಖಚಿತ'. ರಾಜ್ಯದ ಬೊಕ್ಕಸದ ಮೇಲೆ ಋಣಭಾರ ಹೊರಿಸುವ ಅರ್ಥನೀತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಎಲ್ಲ ಆಯಾಮ ಪರಿಶೀಲಿಸಿದಾಗ ನೀವು ಕೊಟ್ಟ ಉಚಿತ ವಿದ್ಯುತ್‌ ಭರವಸೆ ಈಡೇರಿಸುವುದಕ್ಕೆ ವಾರ್ಷಿಕ 9 ಸಾವಿರ ಕೋಟಿ ರೂ. ಬೇಕಾಗುತ್ತದೆ. ಅಂದರೆ ವಾರ್ಷಿಕವಾಗಿ ಮತ್ತೆ 9 ಸಾವಿರ ಕೋಟಿ ಸಾಲದ “ಹೂಡಿಕೆ” ಮಾಡುವ ಯೋಚನೆ ನಿಮ್ಮದಾಗಿದೆ. ಭರವಸೆ ಉಚಿತ, ಸಾಲ ಖಚಿತ ಎಂಬ ಅರ್ಥನೀತಿಯನ್ನು ಸ್ವಲ್ಪ ಬದಲಾಯಿಸಿಕೊಳ್ಳಿ ಎಂದು ಟೀಕಿಸಿದ್ದಾರೆ.

ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕೆಂಬ ವಿತ್ತ ನೀತಿಯನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ರಾಜ್ಯದ ಮೇಲೆ ಹೇರಿ ಹೋಗಿದ್ದಾರೆ. ಸಾಲ ಎತ್ತುವಳಿಯನ್ನೇ ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸುವ ಅವರ ಭಂಡತನ ಅರ್ಥಶಾಸ್ತ್ರದ ಹೊಸ ವ್ಯಾಖ್ಯಾನವೇ ಸರಿ. ದಿವಾಳಿ ಹೊಂದುವುದನ್ನೇ ಪ್ರಧಾನ ಗುರಿಯಾಗಿಸಿಕೊಂಡ ಅರ್ಥವ್ಯವಸ್ಥೆಗೆ ನಿಮ್ಮ ನೀತಿ ಆದರ್ಶವಾಗಬಹುದು ಎಂದು ತಿರುಗೇಟು ನೀಡಿದ್ದಾರೆ.

ಕುತ್ತಿಗೆವರೆಗೆ ಮುಳುಗಿದ್ದ ಎಸ್ಕಾಂಗಳನ್ನು ಸಾಲದ ಹೊರೆಯಿಂದ ಮೇಲೆತ್ತಿದ್ದೇವೆ ಎಂದು ಬೆನ್ನು ಚಪ್ಪರಿಸಿಕೊಂಡಿದ್ದೀರಿ, ಸಂತೋಷ. ಸಮಕಾಲೀನ ರಾಜಕಾರಣದ “ಉತ್ತರಪುರುಷ” ಎಂದು ಬಿರುದಾಂಕಿತರಾದ ನಿಮ್ಮಿಂದ ಇಂಥ ಸುಳ್ಳು ಬಡಾಯಿಗಿಂತ ಹೆಚ್ಚಿನದನ್ನು ನಿರೀಕ್ಷಿಸಲು ಸಾಧ್ಯವೇ? ನೀವು ಎಸ್ಕಾಂಗಳ ಮೇಲೆ ಹೊರಿಸಿ ಹೋದ ಸಾಲದ ಗಂಟನ್ನು ಇಳಿಸಿದ್ದು ನಾವು ಎಂಬುದನ್ನು ಮರೆಯಬೇಡಿ. ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕೆಪಿಸಿಎಲ್‌ ಮೇಲಿನ 10,203 ಕೋಟಿ ರೂ. ಸಾಲವೂ ಸೇರಿದಂತೆ 2013 ರಿಂದ 2018 ರ ಅವಧಿಯಲ್ಲಿ 33,414.20 ಕೋಟಿ ರೂ. ಸಾಲದ ಗಂಟನ್ನು ಎಸ್ಕಾಂಗಳ ಮೇಲೆ ಹೊರಿಸಿದ್ದೀರಿ. ನೀವೇ ಸ್ಟೇರಿಂಗ್‌ ಹಿಡಿದು “ಸಮನ್ವಯ” ಸಾಧಿಸಿದ ಮೈತ್ರಿ ಸರ್ಕಾರದ ಕಾಲದಲ್ಲಿ 27,178 ಕೋಟಿ ರೂ. ಸಾಲದ ಹೊರೆ ಎಸ್ಕಾಂಗಳ ಮೇಲೆ ಬಿತ್ತು ಎಂದು ಸಿದ್ದರಾಮಯ್ಯ ಕಾಲದಲ್ಲಿ ಇಂಧನ ಇಲಾಖೆ‌ ಮೇಲೆ ಬಿದ್ದ ಸಾಲದ ಹೊರೆಯ ಬಗ್ಗೆ ಸಚಿವರು ಟ್ವೀಟ್ ಮಾಡಿದ್ದಾರೆ.

ವಾಸ್ತವವನ್ನು ಮರೆ ಮಾಚುವುದಕ್ಕಾಗಿ ನೀವು ಸಾಲವನ್ನು ಬಂಡವಾಳ ಹೂಡಿಕೆ ಎಂದು ವ್ಯಾಖ್ಯಾನಿಸಿದ್ದೀರಿ. ಇಷ್ಟೊಂದು ಸಾಲ ಮಾಡಿದ ಮೇಲೆ ಹೊರೆ ಇಳಿಸಿದ್ದೇನೆ ಎಂದು ಬೆನ್ನು ತಟ್ಟಿಕೊಳ್ಳುವ ನಿಮ್ಮ ಜ್ಞಾನನಿಧಿಯ ಬಗ್ಗೆ ಸಾಮಾನ್ಯ ಪ್ರಜೆಯೂ ಸರ್ವಾಂಗಗಳಿಂದಲೂ ಕನಿಕರ ವ್ಯಕ್ತಪಡಿಸಬಹುದು. ಈ ಕಾರಣಕ್ಕಾಗಿಯೇ ನೀವು ಕತ್ತಲೆಯಲ್ಲಿ ಬಜೆಟ್‌ ಓದಿದ ಸಂಗತಿಯನ್ನು ನಾನು ನೆನಪಿಸಿದ್ದೇನೆ. ನುಡಿದಂತೆ ನಡೆಯುವವರು ನಾವು ಎಂದು ಅತಿಯಾಗಿ ಬೆನ್ನುತಟ್ಟಿಕೊಳ್ಳಬೇಡಿ. ನಿಮ್ಮ ನಡೆ-ನುಡಿಯೊಳಗಿನ ಕಾಪಟ್ಯ ಎಲ್ಲರಿಗೂ ಗೊತ್ತು. ಇದೇ ನನ್ನ ಕೊನೆಯ ಚುನಾವಣೆ ಎಂದು ಎಷ್ಟು ಬಾರಿ ನುಡಿದಿರಿ, ಎಷ್ಟು ಬಾರಿ ತಪ್ಪಿದಿರಿ ? ರಾಜಕೀಯವಾಗಿ ಮರು ಜನ್ಮ ನೀಡಿದ ಬಾದಾಮಿಯನ್ನು ತ್ಯಜಿಸಿ ಕೋಲಾರಕ್ಕೆ ವಲಸೆ ಹೊರಟಿದ್ದೀರಿ. ಇದು ನುಡಿದಂತೆ ನಡೆಯುವ ಪರಿಯಾ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ಮಾತು, ಕೃತಿ ಒಂದು ರೀತಿಯಲ್ಲಿ “ಹಸ್ತಿ ದಂತ” ಇದ್ದಂತೆ. ಆನೆಗೆ ಇರುವುದು ಎರಡೇ ದಂತ ಎಂದು ಭಾವಿಸುವುದು ಎಷ್ಟು ಮೂರ್ಖತನವೋ, ಸಿದ್ದರಾಮಯ್ಯನವರ ನುಡಿಯಂತೆ ನಡೆ ಎಂಬುದು ಅಷ್ಟೇ ಅಪಾಯಕಾರಿ. ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ನೀಡಬೇಕಿದ್ದ ವಿದ್ಯುತ್‌ ಸಬ್ಸಿಡಿಯನ್ನೇ ಬಾಕಿ ಇಟ್ಟು ಹೋದ ಘನ ಸರ್ಕಾರ ತಮ್ಮದ್ದಾಗಿತ್ತು ಎಂಬುದನ್ನು ಮರೆಯದಿರಿ ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಬಾಲಿವುಡ್​ಗೆ ಕಾಲಿಟ್ಟ 'ಕಾಂತಾರ' ನಟಿ: ದಿ ವ್ಯಾಕ್ಸಿನ್​ ವಾರ್​ ಚಿತ್ರದಲ್ಲಿ ಸಪ್ತಮಿ ಗೌಡ

ABOUT THE AUTHOR

...view details