ಬೆಂಗಳೂರು:ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ದೇಶದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಕರ್ನಾಟದ ಐದನೇ ಸ್ಥಾನದಲ್ಲಿದೆ. ಪ್ರತಿಯೊಂದು ವರ್ಗದ ಕ್ಷೇತ್ರವನ್ನೂ ವ್ಯಾಪಿಸಿಕೊಳ್ಳುತ್ತಿರುವ ಸೋಂಕಿಗೆ ಇನ್ನೂ ಅಧಿಕೃತ ಔಷಧ ಬಂದಿಲ್ಲ. ಅನಧಿಕೃತ ಔಷಧಗಳನ್ನು ಜನ ಎಲ್ಲಂದರಲ್ಲಿ ಹುಡುಕುವ ಸ್ಥಿತಿ ನಿರ್ಮಾಣವಾಗಿದೆ.
ಜನರಿಗೆ ಸರ್ಕಾರದ ಮೇಲೆ ಭರವಸೆ ಕಡಿಮೆ ಆಗಿದೆ. ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಇನ್ನೂ ಸೋಂಕಿಗೆ ಔಷಧಿ ಪತ್ತೆಯಾಗಿಲ್ಲ. ಆಲೊಪತಿ ಪದ್ಧತಿಯಲ್ಲಿ ಔಷಧ ಪತ್ತೆಯಾದರೆ ಮಾತ್ರ ಅದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮಾನ್ಯತೆ ನೀಡುತ್ತದೆ. ಆಯುರ್ವೇದ, ಹೋಮಿಯೋಪತಿ, ಯುನಾನಿ, ಹಳ್ಳಿ ಔಷಧಗಳಿಗೆ ಮಾನ್ಯತೆ ಸಿಗುವುದು ಬಹಳ ಕಷ್ಟ. ಸದ್ಯ ಯಾವುದೇ ಔಷಧ ಪತ್ತೆಯಾಗದ ಹಿನ್ನೆಲೆ ಅಧಿಕೃತವಾಗಿ ಔಷಧ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ವಿಧದ ಔಷಧಗಳೂ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸರ್ಕಾರಗಳ ಪ್ರಕಾರ ಅನಧಿಕೃತ. ಅಲ್ಲದೇ ಇದರ ಪ್ರಯೋಗಕ್ಕೆ ಸಿಗುತ್ತಿರುವುದು ಪ್ರಾಯೋಗಿಕ ಮಾನ್ಯತೆ ಮಾತ್ರ.
ದಿನಕ್ಕೊಂದು ಹೊಸ ಸಂಸ್ಥೆ ತನ್ನ ಔಷಧಿಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇಲ್ಲವೇ ಸರ್ಕಾರದ ಸಂಪರ್ಕ ಸಾಧಿಸಿ ಅದನ್ನು ಕೋವಿಡ್ ರೋಗಿಗಳಿಗೆ ನೀಡಲು ಮುಂದಾಗುತ್ತಿದೆ. ಕೆಲವರು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಮುಂದಾಗಿದ್ದು, ರಾಜ್ಯ ಸರ್ಕಾರದ ಕೊರೊನಾ ನಿಯಂತ್ರಣ ಕಾರ್ಯಪಡೆಯ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಾಜ್ಯದ ವಿವಿಧೆಡೆ ಅನಧಿಕೃತವಾಗಿ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಇದ್ದು, ಇದು ಬಹಿರಂಗವಾದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಒಂದೊಮ್ಮೆ ಮಾಹಿತಿ ಕೇಳಿ ಬಂದಲ್ಲಿ ಅವರಿಂದ ವಿವರಣೆ ಪಡೆಯಲಾಗುತ್ತಿದೆ.
ಪತಂಜಲಿ ಹೊರ ತಂದ ಕೋವಿಡ್ ಔಷಧಿ ರಾಜ್ಯದಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ್ ಕಜೆ ಅವರ ಆಯುರ್ವೇದ ಪದ್ಧತಿಯನ್ನು 10 ರೋಗಿಗಳ ಮೇಲೆ ಪ್ರಯೋಗಿಸಲಾಗಿದೆ. ಅದು ಯಶಸ್ವಿಯೂ ಆಗಿದೆ. ಆದರೆ ಎರಡನೇ ಹಂತದ ಪ್ರಯೋಗಕ್ಕೆ ಅವಕಾಶ ನೀಡಲಾಗಿಲ್ಲ. ಕೋವಿಡ್ ಪಾಸಿಟಿವ್ ಬಂದಿದ್ದ ಸಚಿವರೊಬ್ಬರು ಬಹಿರಂಗವಾಗಿ ತಾನು ಕಜೆ ಔಷಧಿ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ. ಅನಧಿಕೃತವಾಗಿ ಸರ್ಕಾರದ ಬಹುತೇಕರು ಗಿರಿಧರ್ ಕಜೆ ಅವರಿಂದ ಔಷಧ ಸ್ವೀಕರಿಸಿದ್ದಾರೆ. ತಮಗೆ ಗುಣವಾಗಿದೆ ಎಂದು ಸಚಿವರು ಹೇಳಿದ್ದರೆ, ಉಳಿದವರು ಸಮಸ್ಯೆ ಕಾಡದಿರುವುದಕ್ಕೆ ಇದೇ ಕಾರಣ ಎಂದಿದ್ದಾರೆ. ಆದರೆ ಇದರ ಎರಡನೇ ಪ್ರಯೋಗಕ್ಕೆ ಕಡಿವಾಣ ಹಾಕಲಾಗಿದೆ.
ಪತಂಜಲಿ ಔಷಧಕ್ಕೆ ಮಾರುಕಟ್ಟೆ ಪ್ರವೇಶವೇ ಸಿಕ್ಕಿಲ್ಲ. ಮಾಹಿತಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ರೋಗಿಗಳು ತ್ವರಿತರವಾಗಿ ಗುಣಮುಖರಾಗಿರುವಲ್ಲಿ ಸಮುದ್ರದ ಆಳದಿಂದ ಸಂಗ್ರಹಿಸಿದ ಪಾಚಿಯಿಂದ ಸಿದ್ಧಪಡಿಸಿದ ಆಯುರ್ವೇದ ಔಷಧ ಕಾರಣ ಎನ್ನಲಾಗುತ್ತಿದೆ. ಜತೆಗೆ ಕೇರಳ ಆಯುರ್ವೇದ ಬಳಸಲಾಗಿದೆ ಎಂಬ ಮಾತಿದೆ. ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಆಯುರ್ವೇದ ಔಷಧವನ್ನೇ ಕೊರೊನಾ ಸೋಂಕಿತರ ಸಂಪರ್ಕದಲ್ಲಿ ಇದ್ದವರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಇದೆಲ್ಲದರ ನಡುವೆ ಅಧಿಕೃತ ಔಷಧ ಇನ್ನೂ ಬಂದಿಲ್ಲ, ಅನಧಿಕೃತ ಔಷಧ ಬಳಸುವಂತಿಲ್ಲ ಎನ್ನುವುದು ಜನರನ್ನು ಇನ್ನಷ್ಟು ಆತಂಕಕ್ಕೆ ದೂಡಿದೆ.
ಕೆಲಸ ಮಾಡುವ ಔಷಧ ಬಳಸಿ ಕೊರೊನಾ ವೈರಸ್ನಂತಹ ಸಂದಿಗ್ಧ ಸಮಯದಲ್ಲಿ ಯಾವ ಔಷಧಿ ಕೆಲಸ ಮಾಡುತ್ತದೆಯೋ, ಅದನ್ನು ಗೌರವಿಸಿ. ಅದು ಹೋಮಿಯೋಪತಿ, ಅಲೋಪತಿ ಅಥವಾ ಆಯುರ್ವೇದ ಯಾವುದೇ ಆಗಿರಲಿ. ಆಯುರ್ವೇದ ಮತ್ತು ಇಂಗ್ಲಿಷ್ ಔಷಧಿ ನಡುವೆ ತಾರತಮ್ಯ ಬೇಡ. ಆಯುರ್ವೇದ ಭಾರತದ ನೆಲದ ಪದ್ಧತಿ. ಕೋಟ್ಯಂತರ ಜನ ಮನೆ ಮದ್ದುಗಳನ್ನು ತಯಾರಿಸುತ್ತಾರೆ. ಭಾರತೀಯ ಅಡುಗೆ ಮನೆಗಳು ಆಯುರ್ವೇದದ ಆಲಯಗಳಿವೆ. ಭಾರತೀಯರಿಗೆ ಅವರದೇ ಆದ ರೋಗ ನಿರೋಧಕ ಶಕ್ತಿ ಇದೆ. ಆದ್ದರಿಂದ ಬೇರೆ ದೇಶಗಳಲ್ಲಿ ಆರ್ಭಟಿಸಿದ ಕೊರೊನಾ ವೈರಸ್ನ ಪ್ರಭಾವ ಭಾರತದಲ್ಲಿ ಕಡಿಮೆಯಾಗಿದೆ ಎಂದು ಆಯುರ್ವೇದ ವೈದ್ಯ ಗಿರಿಧರ್ ಕಜೆ ಹೇಳಿದ್ದಾರೆ.
ಒಟ್ಟಾರೆ ರಾಜ್ಯದಲ್ಲಿ ಪರಿಹರ ನೀಡಲಿದೆ ಎಂಬ ಆಯುರ್ವೇದ, ಯುನಾನಿ, ಹೋಮಿಯೋಪತಿ ಪದ್ಧತಿಗಳ ಪ್ರಯೋಗಕ್ಕೆ ಅವಕಾಶ ಇಲ್ಲ. ಆಲೊಪತಿಯಲ್ಲಿ ಔಷಧ ಬರುತ್ತಿಲ್ಲ. ಕೊರೊನಾ ಸಂಖ್ಯೆ ಗಗನಕ್ಕೇರುತ್ತಿದ್ದು, ಸಾವು- ನೋವು ತಡೆಯಲು ಸರ್ಕಾರ ಆದಷ್ಟು ಬೇಗ ಒಂದು ನಿರ್ಧಾರ ಕೈಗೊಳ್ಳಬೇಕಿದೆ.