ಬೆಂಗಳೂರು:ಆರ್ಥಿಕ ಸ್ಥಿತಿಗತಿ ಕಾರಣದಿಂದ ಈ ಬಾರಿ ಹೊಸದಾಗಿ ಅನುದಾನ ರಹಿತ ಯಾವುದೇ ಕಾನೂನು ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಿಲ್ಲವೆಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ವಿಧಾನ ಪರಿಷತ್ನಲ್ಲಿ ತಿಳಿಸಿದ್ದಾರೆ.
ಅನುದಾನರಹಿತ ಕಾನೂನು ಕಾಲೇಜುಗಳು ಅನುದಾನದ ವ್ಯಾಪ್ತಿಗೆ ಬರುತ್ತವೆಯೇ... ಸಚಿವ ಮಾಧುಸ್ವಾಮಿ ಹೇಳಿದ್ದೇನು? - ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿಯವರು ಈ ಬಾರಿ ಹೊಸದಾಗಿ ಅನುದಾನ ರಹಿತ ಯಾವುದೇ ಕಾನೂನು ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಸದಸ್ಯರಾದ ಅರುಣ್ ಶಹಾಪುರ ಹಾಗೂ ಸಂಕನೂರು ಅವರು ಅನುದಾನ ರಹಿತ ಕಾನೂನು ಕಾಲೇಜುಗಳನ್ನು ಅನುದಾನಕ್ಕೆ ಒಳಪಡಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈಗಾಗಲೇ ಸರ್ಕಾರಿ ಮತ್ತು ಖಾಸಗಿ ಸೇರಿ 27 ಕಾನೂನು ಕಾಲೇಜುಗಳಿಗೆ ಅನುದಾನ ಕೊಟ್ಟು ನಡೆಸುತ್ತಿದ್ದೇವೆ. ಈಗ ಹೊಸದಾಗಿ 74 ಅನುದಾನರಹಿತ ಕಾಲೇಜು ಇವೆ, ಅವುಗಳನ್ನು ಅನುದಾನದ ವ್ಯಾಪ್ತಿಗೆ ತರಲು ಹೋದರೆ ವಾರ್ಷಿಕ 70 ಕೋಟಿ ಖರ್ಚು ಬರಲಿದೆ. ಹಾಗಾಗಿ ಈ ವರ್ಷ ಇದನ್ನು ಮಾಡಲು ಸಾಧ್ಯವಿಲ್ಲ. ಈ ಸಂಬಂಧ ಸಿಎಂ ಜೊತೆ ಮಾತನಾಡಿ ಕಾಲೇಜು ಆಯುಕ್ತರಿಂದ ವರದಿ ತರಿಸಿಕೊಂಡು ಏನು ಮಾಡಬಹುದು ಎಂದು ಚಿಂತನೆ ನಡೆಸಲಿದ್ದೇವೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ, 1985-95 ರವರೆಗಿನ ಕಾಲೇಜುಗಳನ್ನಾದರೂ ಅನುದಾನಕ್ಕೆ ಒಳಪಡಿಸಿ ಎಂದು ಆಗ್ರಹಿಸಿದರು. ಆದರೆ ಈ ಬಾರಿ ಯಾವ ಕಾರಣಕ್ಕೂ ಸಾಧ್ಯವಿಲ್ಲ, ನಿಮ್ಮ ಬೇಡಿಕೆಯನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದರು.