ಬೆಂಗಳೂರು:ಸಚಿವ ಸ್ಥಾನ ವಂಚಿತ ಮಾಜಿ ಸಚಿವ ಉಮೇಶ್ ಕತ್ತಿ ಜೊತೆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಡೆಸಿದ ಎರಡನೇ ಮನವೊಲಿಕೆ ಸಭೆಯೂ ವಿಫಲಗೊಂಡಿದ್ದು, ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳಲ್ಲ ಎನ್ನುತ್ತಾ ಲಕ್ಷ್ಮಣಸವದಿ ವಿರುದ್ಧ ಅಸಮಧಾನ ವ್ಯಕ್ತಪಡಿಸಿ ಸಿಎಂ ನಿವಾಸದಿಂದ ಕತ್ತಿ ಹೊರ ನಡೆದಿದ್ದಾರೆ.
ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸದಲ್ಲಿ ಯಡಿಯೂರಪ್ಪ ಎದುರೇ ಉಮೇಶ್ ಕತ್ತಿ - ಲಕ್ಷ್ಮಣ್ ಸವದಿ ಜಟಾಪಟಿ ನಡೆದಿದೆ. ಪರಸ್ಪರ ಜೋರು ಮಾತುಗಳಿಂದ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಕತ್ತಿಗೆ ಸಚಿವ ಸ್ಥಾನ ತಪ್ಪಿದ್ದು ನನಗೆ ಸಂಬಂಧಸಿದ್ದಲ್ಲ, ಹೈಕಮಾಂಡ್ ನನ್ನ ಕೆಲಸ ಗುರುತಿಸಿ ಮಂತ್ರಿ ಮಾಡಿದ್ದಾರೆ, ನನ್ನ ವಿಚಾರಕ್ಕೆ ಯಾಕ್ ಬರ್ತೀರ ಎಂದು ಸಚಿವ ಸವದಿ ಕತ್ತಿಗೆ ಕೇಳಿದ್ದಾರೆ. ಸವದಿ ಮಾತಿಂದ ಸಿಟ್ಟಾದ ಉಮೇಶ್ ಕತ್ತಿ, ಎಲ್ಲ ನಿನ್ನಿಂದಲೇ ಆಗಿದ್ದು ಹೈಕಮಾಂಡ್ ನಲ್ಲಿ ಲಾಬಿ ಮಾಡಿ ಸಚಿವ ಸ್ಥಾನ ಗಿಟ್ಟಿಸಿದ್ದೀಯ, ನಿನ್ನ ಹಾಗೆ ಇನ್ನೊಬ್ಬರ ಶಿಫಾರಸ್ಸಿನ ಮಂತ್ರಿಗಿರಿ ನಾನು ಕೇಳಲ್ಲ ಎಂದು ಸವದಿ ವಿರುದ್ಧ ಸಿಟ್ಟಲ್ಲಿ ವಾಗ್ದಾಳಿ ನಡೆಸಿದರು.