ಬೆಂಗಳೂರು : ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ವಿಧಾನಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ಅವರು ತೀರ್ಪು ಕಾಯ್ದಿರಿಸಿದ್ದಾರೆ.
ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಇಂದು ನಡೆದ ವಿಚಾರಣೆ ವೇಳೆ ಶಾಸಕ ಉಮೇಶ್ ಜಾಧವ್, ಅವರ ಪರ ವಕೀಲ ಸಂದೀಪ್ ಪಾಟೀಲ್ , ಕಾಂಗ್ರೆಸ್ ಪರ ವಕೀಲ ಶಶಿಕಿರಣ್ ಮತ್ತಿತರರು ಈ ವೇಳೆ ಹಾಜರಿದ್ದರು. ತಮ್ಮ ಶಾಸಕ ಸ್ಥಾನಕ್ಕೆ ಉಮೇಶ್ ಜಾಧವ್ ಅವರು ಕೆಲ ದಿನಗಳ ಹಿಂದೆ ರಾಜೀನಾಮೆಯನ್ನು ಸ್ಪೀಕರ್ ಅವರಿಗೆ ಸಲ್ಲಿಸಿದ್ದರು. ಈ ಕುರಿತು ಸ್ಪೀಕರ್ ಅವರು ಉಮೇಶ್ ಜಾಧವ್ ಅವರನ್ನು ವಿಚಾರಣೆ ನಡೆಸಿದರು.
ಎರಡೂ ಕಡೆ ವಾದ ಆಲಿಸಿದ ನಂತರ ಸ್ಪೀಕರ್ ವಿಚಾರಣೆಯನ್ನು ಮುಂದೂಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಕುಮಾರ್, ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಸಹ ನಮ್ಮ ಮುಂದಿದೆ. ಎಲ್ಲವನ್ನೂ ನೋಡಿ ತೀರ್ಮಾನ ಮಾಡುತ್ತೇನೆ ಎಂದು ಹೇಳಿದರು. ಉಮೇಶ್ ಜಾಧವ್ ರಾಜೀನಾಮೆ ಅಂಗೀಕಾರದ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಶಾಸಕರ ರಾಜೀನಾಮೆ ಯಾವಾಗ ಅಂಗೀಕಾರ ಮಾಡುತ್ತೇನೆ, ಮಾಡಲ್ಲ ಎಂಬುದರ ಬಗ್ಗೆ ಟೈಮ್ ಬಾಂಡ್ ಹೇಳುವುದಕ್ಕೆ ಆಗುವುದಿಲ್ಲ ಎಂದರು. ಸಂವಿಧಾನದ 10 ನೇ ಪರಿಚ್ಛೇದದ ಅನ್ವಯ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಅನರ್ಹತೆ ಕುರಿತ ನಿಯಮಗಳು ನೂನ್ಯತೆಯಿಂದ ಕೂಡಿವೆ. ಅದರ ಬದಲಾವಣೆ ಆಗುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಯ್ದೆಯ ಬದಲಾವಣೆ ಅಗತ್ಯ:
ನಾನು ಈಗ ಅನರ್ಹತೆಗೊಳಿಸಿದರೂ ಚಿಂಚೋಳಿಯಿಂದ ಉಮೇಶ್ ಜಾಧವ್ ಮತ್ತೆ ಸ್ಪರ್ಧೆ ಮಾಡುವ ಅವಕಾಶ ಕಾನೂನಿನಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಯ್ದೆಯ ಬದಲಾವಣೆಯ ಅಗತ್ಯವಿದೆ ಎಂಬುದರ ಬಗ್ಗೆ ನಾನು ಪರವಾಗಿದ್ದೇನೆ. ಆದರೆ, ಮುಂದೆ ಅವರು ಎಲೆಕ್ಷನ್ಗೆ ನಿಲ್ಲಬಾರದು ಅನ್ನುವ ತೀರ್ಪು ಹೈಕೋರ್ಟ್ನಲ್ಲಿ ತೀರ್ಮಾನ ಆಗಬೇಕು. ರಾಜೀನಾಮೆ ಮತ್ತು ವಜಾಗೊಳಿಸಿ ಎಂಬ ಎರಡು ತೀರ್ಪು ನಮ್ಮ ಮುಂದಿದೆ ಎಂದು ವಿವರಿಸಿದರು.
ಸದಸ್ಯರನ್ನು ಶಾಸಕತ್ವದಿಂದ ವಜಾಗೊಳಿಸಬೇಕೆಂದು ದೂರು ಬಂದಿದ್ದು, ಈ ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿ ಇದೆ. ಈ ಮಧ್ಯೆ ಅದೇ ಸದಸ್ಯ ಬಂದು ರಾಜೀನಾಮೆ ನೀಡಿರೋದು ನನ್ನ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಪ್ರಕರಣ. ನನ್ನ ಮನಸಾಕ್ಷಿ, ಕಾನೂನು ಏನು ಹೇಳುತ್ತದೆಯೋ ಹಾಗೆ ಕೆಲಸ ಮಾಡುತ್ತೇನೆ. ರಾಜ್ಯದ ಜನರಿಗೆ ಗೊತ್ತಾಗಬೇಕೆಂದು ಮಾಧ್ಯಮಗಳ ಮುಂದೆ ಪಾರದರ್ಶಕವಾಗಿ ವಿಚಾರಣೆ ಮಾಡುತ್ತಿದ್ದೇನೆ ಎಂದರು. ವಜಾಗೊಳಿಸುವ ವಿಚಾರಣೆಗೆ ತರರಾರಿಲ್ಲ ಎಂದ ಜಾಧವ್ ಪರ ವಕೀಲರು ಹೇಳಿದ್ದಾರೆ. ಮುಂದೆ ಆ ವಿಚಾರಣೆಗೆ ಅವರು ಹಾಜರಾಗುತ್ತಾರೆ ಎಂದು ಹೇಳಿದರು.
ರಾಜೀನಾಮೆ ನೀಡೋದು ಅಂಗೀಕಾರ ಮಾಡೋದು ಸ್ಪೀಕರ್ ಮತ್ತು ಶಾಸಕರ ನಡುವೆ ಇರುವ ವಿಚಾರ. ಆದರೆ ಇವತ್ತು ಎಲ್ಲರ ಮುಂದೆ ಯಾಕೆ ವಿಚಾರಣೆ ಮಾಡುತ್ತಿದ್ದೇನೆ ಅಂದರೆ, ಜಾಧವ್ ಅವರು ರಾಜೀನಾಮೆ ನೀಡುವ ಮೊದಲೇ ಅವರು ಇದ್ದ ಪಕ್ಷದ ನಾಯಕರು ನನಗೆ ದೂರು ನೀಡಿದ್ದರು. ಆ ದೂರು ಇನ್ನೂ ವಿಚಾರಣೆ ಹಂತದಲ್ಲಿದೆ. ಅಲ್ಲದೇ ಸದಸ್ಯರ ಕ್ಷೇತ್ರದ ಜನರು ಕೆಲವು ಮನವಿ ಮಾಡಿದ್ದಾರೆ. ಹಾಗಾಗಿ, ಸತ್ಯದ ನಿಷ್ಠೆ ಏನು ಅಂತ ಜನರಿಗೆ ನಾನು ತಿಳಿಸಬೇಕಾಗಿದೆ ಎಂದರು.
ಡಾ. ಉಮೇಶ್ ಜಾಧವ್ ಸ್ಪರ್ಧೆಯ ವಿಚಾರ ನಮ್ಮ ವ್ಯಾಪ್ತಿಗೆ ಬರುವುದಿಲ್ಲ:
ಉಮೇಶ್ ಜಾಧವ್ ಸ್ಪರ್ಧೆ ಕುರಿತು ನಾನೂ ಏನೂ ಹೇಳಲ್ಲ ಎಂದ ಅವರು, ಮಾಧ್ಯಮಗಳ ಎದುರು ವಿಚಾರಣೆ ಮಾಡುವುದು ಹೊಸ ಅಧ್ಯಾಯ. ಮತದಾರರ ಅಭಿಪ್ರಾಯವನ್ನು ಚುನಾಯಿತ ಪ್ರತಿನಿಧಿಯಾಗಿ ರಾಜೀನಾಮೆ ಕೊಡೊವಾಗ ಕೇಳಿದ್ದಾರೊ ಇಲ್ಲವೊ ಎಂಬುದನ್ನ ಆಲಿಸಿದ್ದೇನೆ. ಈಗ ನಡೆಸಿದ ವಿಚಾರಣೆಯಿಂದ ಒಂದು ಅಂಶ ಗೊತ್ತಾಗಿದೆ. ಅನರ್ಹತೆ ವಿಚಾರವಾಗಿ ಸಂವಿಧಾನದ 10 ನೇ ಪರಿಚ್ಛೇದ ಸಮರ್ಪಕವಾಗಿಲ್ಲ. ದೌರ್ಬಲ್ಯಗಳಿಂದ ಕೂಡಿದೆ. ಅದಕ್ಕೆ ತಿದ್ದುಪಡಿಯಾಗಬೇಕಾದ ಅಗತ್ಯವಿದೆ. ಸಂವಿಧಾನದ ಪ್ರಕಾರ ಅನರ್ಹ ಮಾಡಿದರೂ ಅದೇ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡಲು ಅನರ್ಹಗೊಂಡ ಚುನಾಯಿತ ಪ್ರತಿನಿಧಿಗೆ ಅವಕಾಶವಿದೆ ಎಂದು ಹೇಳಿದರು.