ಬೆಂಗಳೂರು: ವರ್ಗಾವಣೆಗೆ ಸಂಬಂಧಿಸಿದಂತೆ ವೈರಲ್ ಆಗಿದೆ ಎನ್ನಲಾದ ಆಡಿಯೋ ಬಗ್ಗೆ ಚಿತ್ರ ನಿರ್ಮಾಪಕ ಹಾಗೂ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉಮಾಪತಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿದ್ದಾರೆ. ಹೆಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿ ಮಾತನಾಡಿರುವ ಅವರು, "ಈಗಾಗಲೇ ದೂರು ಕೊಟ್ಟಿದ್ದೇನೆ ಮತ್ತು ಮಾಧ್ಯಮಗಳಿಗೆ ಸ್ವಷ್ಟನೆ ನೀಡಿದ್ದೇನೆ. ಕಾನೂನಾತ್ಮಕವಾಗಿ ಹೋರಾಟ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಏನಿದು ಪ್ರಕರಣ?:ಪೊಲೀಸ್ ವರ್ಗಾವಣೆಗೆ ಸಂಬಂಧಿಸಿದಂತೆಆಡಿಯೋವೊಂದು ವೈರಲ್ ಆಗಿ ಸಂಚಲನ ಸೃಷ್ಟಿಸಿದೆ. ಕಳೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸ್ಯಾಂಡಲ್ವುಡ್ ಚಿತ್ರ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬುವವರ ನಡುವೆ ನಡೆದಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಒಬ್ಬರ ವರ್ಗಾವಣೆ ಕುರಿತ ಸಂಭಾಷಣೆಯ ಆಡಿಯೋವೊಂದು ಬಹಿರಂಗಗೊಂಡಿದೆ ಎಂದು ಸುದ್ದಿಯಾಗಿದೆ.
ಆಡಿಯೋದಲ್ಲಿರೋದೇನು? :ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬುವವರ ನಡುವೆ ನಡೆದಿರುವ ಫೋನ್ ಸಂಭಾಷಣೆ ಎನ್ನಲಾದ ಆಡಿಯೋದಲ್ಲಿ ’’ತಮ್ಮ ಸಂಬಂಧಿ ಇನ್ಸ್‌ಪೆಕ್ಟರ್ ಓರ್ವರ ವರ್ಗಾವಣೆ ವಿಚಾರವನ್ನು ವಿಜಯ್ ಪ್ರಸ್ತಾಪಿಸಿದ್ದಾರೆ. ಅದೇ ಠಾಣೆಯಲ್ಲಿ ಉಳಿಯಲು ಇನ್ಸ್‌ಪೆಕ್ಟರ್ ಒಬ್ಬರು ಹಣ ನೀಡಿದ್ದು, ಈಗಾಗಲೇ ಅದನ್ನ ಹೋಮ್ ಮಿನಿಸ್ಟರ್ಗೆ ತಲುಪಿಸಿರುವುದಾಗಿಯೂ' ಹಾಗೂ 'ನಾನು ಹೇಳಿದರೆ ನಮ್ಮ ಸರ್ಕಾರದಲ್ಲಿ ಕೆಲಸ ಆಗಿಯೇ ಆಗುತ್ತದೆ' ಎಂದು ಉಮಾಪತಿ ಮಾತನಾಡಿದ್ದಾರೆ ಎಂದು ವೈರಲ್ ಆಗಿರುವ ಈ ಆಡಿಯೋದಲ್ಲಿ ಆರೋಪಿಸಲಾಗಿದೆ ಎಂದು ವರದಿಯಾಗಿದೆ.