ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾಜಿ ಸಂಸ್ಕೃತಿ ಪಾಲಿಸುವ ಹಿಟ್ಲರ್ನನ್ನಾಗಿಸುವ ಪ್ರಯತ್ನವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾಡುತ್ತಿದ್ದಾರೆ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಿಂದಿ ಭಾಷೆಯನ್ನು ಬಲವಂತವಾಗಿ ಜನರ ಮೇಲೆ ಹೇರುತ್ತಿದೆ. ವಿವಿಧತೆಯಲ್ಲಿ ಏಕತೆ ಇರುವ ದೇಶ ನಮ್ಮದು. ನಮ್ಮ ದೇಶದಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದೆ. ಬಹುಭಾಷೆ, ಬಹುಪಕ್ಷದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿವಾದ ಸೃಷ್ಟಿಸುತ್ತಿದ್ದಾರೆ. ಅಲ್ಲದೆ, ಮೋದಿ ಮೂಲಕ ಈ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು.
ಇವರ ಪ್ರಯತ್ನಗಳು ಸಂವಿಧಾನಕ್ಕೆ ವಿರೋಧವಾಗಿವೆ. ಅವರ ವೈಯುಕ್ತಿಕ ಅಭಿಪ್ರಾಯಗಳನ್ನು ಜಾರಿಗೆ ತರುತ್ತಿದ್ದಾರೆ. ದೇಶದ ಜನ ಇದನ್ನ ಒಪ್ಪುವುದಿಲ್ಲ. ಅಮಿತ್ ಶಾ ನೀವು ಯಾಕೆ ಇಂತ ಹೇಳಿಕೆ ಕೊಡ್ತೀರ. ನಿಮ್ಮ ಹೇಳಿಕೆ ನಿಜವಾದರೆ ಎನ್ಡಿಎ ಬಗ್ಗೆ ಏನ್ ಹೇಳ್ತೀರ. ಎನ್ಡಿಎ ತಂದಿದ್ದು ವಾಜಪೇಯಿಯವರೇ. ಅದನ್ನೂ ನೀವು ಪ್ರಶ್ನಿಸುತ್ತೀರಾ? ಈಗಲೂ ಎನ್ಡಿಎ ಮೈತ್ರಿಕೂಟದಲ್ಲಿ ಹಲವು ಪಕ್ಷಗಳಿವೆ. ನಾಗಾ ಪೀಪಲ್ಸ್, ಶಿವಸೇನೆ, ಎಐಡಿಎಂಕೆ, ಅಕಾಲಿದಳ, ಆಲ್ ಜಾರ್ಖಂಡ್ ಯೂನಿಯನ್, ಅಸ್ಸೋಂ ಗಣಪರಿಷತ್, ನ್ಯಾಷನಲ್ ಪೀಪಲ್ ಪಾರ್ ಡೆಮಾಕ್ರಸಿ, ಪಟ್ಟಾಳಿ ಮಕ್ಕಳ್ ಕಚ್ಚಿ, ಸಿಕ್ಕೀಂ ಪ್ರಜಾಪರಿಷತ್ ಪಾರ್ಟಿ ನಿಮ್ಮ ಜೊತೆಗಿವೆ. ಬಹುಪಕ್ಷ ವ್ಯವಸ್ಥೆಗೆ ಅದೇಗೆ ವಿರೋಧ ವ್ಯಕ್ತಪಡಿಸುತ್ತೀರ. ಎನ್ಡಿಎ ಮೈತ್ರಿ ಕೂಡ ನಿಮಗೆ ಏಕೆ ಬೇಕು? ನಿಮ್ಮ ಮುಖಂಡತ್ವದಲ್ಲೇ ಈ ಎಲ್ಲಾ ಪಕ್ಷಗಳು ನಿಮ್ಮ ಜೊತೆ ಇವೆ. ತಾಕತ್ತಿದ್ದರೆ 24 ಗಂಟೆಗಳಲ್ಲಿ ಈ ಪಕ್ಷಗಳ ಮೈತ್ರಿಯಿಂದ ಹೊರಬನ್ನಿ. ನಿಮ್ಮದೇ ಬಹುಮತವಿದೆ ಯಾಕೆ ಚಿಂತೆ ಮಾಡ್ತೀರ ಎಂದು ಅಮಿತ್ ಶಾ ಗೆ ಉಗ್ರಪ್ಪ ಸವಾಲು ಹಾಕಿದ್ದಾರೆ.
ಇನ್ನು, ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಜನ ತತ್ತರಿಸಿದ್ದಾರೆ. 38 ಸಾವಿರ ಕೋಟಿ ಸರ್ಕಾರ ವರದಿ ಕೊಟ್ಟಿದೆ. ಇಲ್ಲಿಯೂ ನಿಮ್ಮದೇ ಸರ್ಕಾರವಿದೆ. ನಿಮ್ಮ ಪಕ್ಷದವರೇ ಮುಖ್ಯಮಂತ್ರಿಯಾಗಿದ್ದಾರೆ. ಆ ಮುಖ್ಯಮಂತ್ರಿಗೆ ಪ್ರಧಾನಿ ಭೇಟಿಗೆ ಅವಕಾಶ ಸಿಗ್ತಿಲ್ಲ. ಪರಿಹಾರದ ನೆರವು ಕೇಳೋಕೆ ನಿಮ್ಮವರಿಗೆ ಪರವಾನಗಿ ನೀಡ್ತಿಲ್ಲ. ರಾಜ್ಯದ ಬಗ್ಗೆ ನಿಮ್ಮ ಧೋರಣೆಯೇನು ಎಂದು ಉಗ್ರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.