ಬೆಂಗಳೂರು:ಮುಜರಾಯಿ ಇಲಾಖೆ ವ್ಯಾಪ್ತಿಯ ಜಿಲ್ಲಾವಾರು 'ಎ' ಪ್ರವರ್ಗದ ದೇವಾಲಯಗಳಲ್ಲಿ ವಿಶೇಷವಾಗಿ ಯುಗಾದಿ ಹಬ್ಬ ಆಚರಿಸಲು ಸೂಚಿಸಲಾಗಿದೆ. ಈ ಸಂಬಂಧ ಮುಜರಾಯಿ ಸಚಿವೆ ವಿಡಿಯೋ ಕಾನ್ಫರೆನ್ಸ್ ಮಾಡಿ, ರಾಜ್ಯದ ಜಿಲ್ಲಾವಾರು ಪ್ರಸಿದ್ಧ 3 ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ವಿಶೇಷವಾಗಿ ಪೂಜೆ, ಪ್ರಾರ್ಥನೆ, ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ನಿರ್ದೇಶಿಸಲಾಗಿದೆ.
ದೇವಾಲಯದ ಮುಂಭಾಗದಲ್ಲಿ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ 'ಧಾರ್ಮಿಕ ದಿನಾಚರಣೆ' ಎಂಬ ಬಗ್ಗೆ, ಬ್ಯಾನರ್, ನಾಮಫಲಕ (ಬೋರ್ಡ್) ಅಳವಡಿಸಬೇಕು. ದೇವಾಲಯದ ಮುಂಭಾಗದಲ್ಲಿ ಕಮಾನಿನಲ್ಲಿ (ಆರ್ಚ್) ರೀತಿಯಲ್ಲಿ ದೇವಾಲಯದ ಹೆಸರಿನೊಂದಿಗೆ 'ರಾಜ್ಯ ಧಾರ್ಮಿಕ ದಿನಾಚರಣೆ' ಎಂದು ವಿಶೇಷವಾಗಿ ನಮೂದಿಸುವಂತೆ ಸೂಚನೆ ನೀಡಲಾಗಿದೆ.
ಯುಗಾದಿ ದಿನ ಬೆಳಗ್ಗೆ ದೇವರಿಗೆ ವಿಶೇಷ ಸಂಕಲ್ಪನೆ, ಪ್ರಾರ್ಥನೆ ಮೂಲಕ ದೇವರಿಗೆ ವಿಶೇಷವಾಗಿ ಅಭಿಷೇಕ, ಅಲಂಕಾರ, ಪೂಜೆಯೊಂದಿಗೆ ಬೇವು ಬೆಲ್ಲ ವಿತರಿಸಬೇಕು. ಪ್ರಸಿದ್ಧ ಜ್ಯೋತಿಷಿಗಳಿಂದ ಪಂಚಾಂಗ ಶ್ರವಣ ಮಾಡಿಸಿ, ಪೂಜೆಯ ನಂತರ ಸಿಹಿ ಪ್ರಸಾದಗಳನ್ನು ಆರ್ಥಿಕವಾಗಿ ದುರ್ಬಲವಾಗಿರುವ ಜನರಿಗೆ ಹಂಚಬೇಕು. ದೇವಾಲಯಗಳಲ್ಲಿ ಬೆಳಗ್ಗೆ/ಸಂಜೆ ಹರಿಕಥೆ, ಭಜನೆ, ಪ್ರಾರ್ಥನೆ, ಸುಗಮ ಸಂಗೀತ, ಭರತನಾಟ್ಯ ಮತ್ತು ಮುಂತಾದ ಸ್ಥಳೀಯವಾಗಿ ಲಭ್ಯವಾಗುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತೆ ಸೂಚಿಸಲಾಗಿದೆ.