ಬೆಂಗಳೂರು:ಮಹಿಳಾ ಪ್ರಯಾಣಿಕರೊಂದಿಗೆ ಊಬರ್ ಚಾಲಕನೊಬ್ಬ ಅಸಭ್ಯವಾಗಿ ವರ್ತಿಸಿ ತನ್ನ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಬಿಟಿಎಂ 2ನೇ ಹಂತದಿಂದ ಜೆಪಿನಗರ ಮೆಟ್ರೋ ಸ್ಟೇಷನ್‌ವರೆಗೆ ಕ್ಯಾಬ್ ಬುಕ್ ಮಾಡಿದ್ದ ಮಹಿಳೆ ಜತೆ ಚಾಲಕ ಅನುಚಿತವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ. ನೊಂದ ಮಹಿಳೆ ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಹಾಕಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಪೋಸ್ಟ್ ವೈರಲ್ ಆದ ನಂತರ, ಮಹಿಳೆ ಮತ್ತೊಂದು ಪೋಸ್ಟ್ ಅನ್ನು ಹಾಕಿ, ಚಾಲಕನ ವಿರುದ್ಧ ಊಬರ್ ಸಂಸ್ಥೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.
ಪೋಸ್ಟ್‌ನಲ್ಲಿ ಏನಿದೆ?ಕ್ಯಾಬ್ ಬುಕ್ ಮಾಡಿದ ಮೇಲೆ ಚಾಲಕನು ಸಮಯಕ್ಕೆ ಸರಿಯಾಗಿ ನನ್ನನ್ನು ಕರೆದುಕೊಂಡು ಹೋಗಲು ಬಂದನು. ಮೊದಲಿಗೆ ಎಲ್ಲವೂ ಸರಿಯಾಗಿಯೇ ಇತ್ತು. ಬಳಿಕ ಇದ್ದಕ್ಕಿದ್ದಂತೆ ಚಾಲಕ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ. ಇದರಿಂದ ನಾನು ಮುಜುಗರಕ್ಕೆ ಒಳಗಾಗಿ, ನಿಗದಿತ ಸಮಯಕ್ಕಿಂತ ಸ್ವಲ್ಪ ಬೇಗನೆ ನಾನು ತಲುಪಬೇಕಿದ್ದ ಸ್ಥಳಕ್ಕೆ ಬಿಡಲು ಕೇಳಿಕೊಂಡೆ. ಅದರಂತೆ ಆತ ಬೇಗ ಸ್ಥಳಕ್ಕೆ ಬಿಟ್ಟಿದ್ದರು. ನಂತರ ಹಣ ಕೊಡಲು ಹೋದಾಗ ಚಾಲಕ ತನ್ನ ಖಾಸಗಿ ಭಾಗಗಳನ್ನು ತೋರಿಸಿದ್ದಾನೆ. ಇದರಿಂದ ನಾನು ಗಾಬರಿಗೊಂಡು ತಕ್ಷಣ ಚಾಲಕನಿಂದ ಓಡಿಹೋದೆ ಎಂದು ಮಹಿಳೆ ಬರೆದುಕೊಂಡಿದ್ದಾರೆ.
ಇದಾದ ಒಂದು ದಿನದ ನಂತರ ಮಹಿಳೆಯು ಮತ್ತೊಂದು ಪೋಸ್ಟ್ ಮಾಡಿದ್ದು, ನಾನು ಆ ಘಟನೆಯ ಬಗ್ಗೆ ಮಾಹಿತಿ ನೀಡಲು ಬಯಸುತ್ತೇನೆ. ನಾನು ಊಬರ್ ಚಾಲಕನ ಕುರಿತು ಕಂಪ್ಲೆಂಟ್ ಮಾಡಿದ್ದೆ. ಈ ಕುರಿತು ಊಬರ್ ತಂಡವು ನನ್ನನ್ನು ಸಂಪರ್ಕಿಸಿ, ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸಿದ್ದು, ಚಾಲಕನ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಕುರಿತು ಊಬರ್ ಪ್ರತಿಕ್ರಿಯೆ ಜತೆಗೆ ಲಿಂಕ್ಡ್‌ಇನ್‌ಗೆ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.