ಬೆಂಗಳೂರು: ಮಾಜಿ ಶಾಸಕ ಯುಬಿ ಬಣಕಾರ್ ಹಾಗೂ ಬಿಜೆಪಿ ಮುಖಂಡ ಡಾ.ಶ್ರೀನಿವಾಸ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಣಕಾರ್, ಡಾ.ಶ್ರೀನಿವಾಸ್ ಅವರಿಗೆ ಪಕ್ಷದ ಬಾವುಟ ನೀಡಿ ಶಾಲು ಹೊದಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು. ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಮಾಜಿ ಸಚಿವೆ ಮೋಟಮ್ಮ, ಮಾಜಿ ಸ್ಪೀಕರ್ ಕೆ.ಬಿ ಕೋಳಿವಾಡ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಮಹಮ್ಮದ್ ಮತ್ತಿತರು ಉಪಸ್ಥಿತರಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಕಾಂಗ್ರೆಸ್ ಪಕ್ಷ ಖಾಲಿಯಾಗಿದೆ, ಎಲ್ಲರೂ ಪಕ್ಷ ಬಿಡುತ್ತಿದ್ದಾರೆ ಎಂಬ ಮಾತನ್ನು ಬಿಜೆಪಿಯವರು ಆಡುತ್ತಿದ್ದರು. ಇದೀಗ ಕಾಂಗ್ರೆಸ್ ಪಕ್ಷಕ್ಕೆ ಶರತ್ತು ರಹಿತರಾಗಿ ಸೇರುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಬಳಿ ಬಹುದೊಡ್ಡ ಪಟ್ಟಿಯೇ ಇದ್ದು, ಈಗಲೇ ಎಲ್ಲವನ್ನು ಘೋಷಿಸುವುದಿಲ್ಲ. ಹಾವೇರಿ ಜಿಲ್ಲೆಯ ಎಲ್ಲಾ ನಾಯಕರ ಜೊತೆ ಚರ್ಚಿಸಿದ ಬಳಿಕವೇ ಯು ಬಿ ಬಣಕಾರ್ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಬಿಜೆಪಿ ಮಾಜಿ ಶಾಸಕ ಯುಬಿ ಬಣಕಾರ್ ಕಾಂಗ್ರೆಸ್ ಸೇರ್ಪಡೆ ಯು ಬಿ ಬಣಕಾರ್ ಜೊತೆ ಹಲವು ಬಿಜೆಪಿ ನಾಯಕರು ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಎಲ್ಲರನ್ನೂ ಹೃದಯಪೂರ್ವಕವಾಗಿ ಸ್ವಾಗತಿಸುತ್ತೇನೆ. ಇದೇ ರೀತಿ ಕುಷ್ಠಗಿಯ ಮಾಜಿ ಶಾಸಕರ ಮೊಮ್ಮಗ ಶ್ರೀನಿವಾಸ್ ಸಹ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು, ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಕೊಪ್ಪಳ ಜಿಲ್ಲೆಯ ನಾಯಕ ಮಲ್ಲಿಕಾರ್ಜುನ ಲೋಣಿ ಸಹ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರು ಸಹ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ನಾಯಕರ ಸೇರ್ಪಡೆಗೆ ಮುನ್ನ ನಾವು ಸ್ಥಳೀಯ ನಾಯಕರ ಜೊತೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಅವರ ಒಪ್ಪಿಗೆ ಬಳಿಕವೇ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ. ಯಾವುದೇ ಶರತು ಇಲ್ಲದೆ ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಇವರು ಸೇರ್ಪಡೆ ಆಗುತ್ತಿದ್ದಾರೆ ಎಂದು ಹೇಳಿದರು.
ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಯು ಬಿ ಬಣಕಾರ್, ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. 30ಕ್ಕೂ ಹೆಚ್ಚು ವರ್ಷದಿಂದ ಬಿಜೆಪಿಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಸೇರಬೇಕಾಯಿತು. ಅನಿವಾರ್ಯವಾಗಿ ಮೂರು ವರ್ಷಗಳ ಬಳಿಕ ನಾನು ಕಾಂಗ್ರೆಸ್ ಸೇರುತ್ತಿದ್ದೇನೆ. ಬಿ ಸಿ ಪಾಟೀಲ್ ಅಧಿಕಾರಕ್ಕಾಗಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಗೆದ್ದು ಸಚಿವರಾಗಿದ್ದಾರೆ.
ಹಿರೇಕೆರೂರ್ನಲ್ಲಿ ಕಾಂಗ್ರೆಸ್ಸನ್ನು ಮತ್ತೊಮ್ಮೆ ಗೆಲ್ಲಿಸುವುದು ಹಾಗೂ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಶ್ರಮಿಸುತ್ತೇವೆ. ಮುಂದಿನ ಐದು ತಿಂಗಳು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕಾಗಿ ದುಡಿಯುತ್ತೇವೆ. ಇದು ನಮ್ಮ ಮುಂದಿರುವ ಗುರಿ ಎಂದರು.
ಬಳಿಕ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಕ್ಷದ ತತ್ವ ಸಿದ್ಧಾಂತ ಹಾಗೂ ನಾಯಕತ್ವವನ್ನು ನಂಬಿ ಜೆಡಿಎಸ್ ಹಾಗೂ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಸೇರುತ್ತಿದ್ದಾರೆ. ಯು ಬಿ ಬಣಕಾರ್ ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದವರು. ಇಂದು ಅಲ್ಲಿನ ಅವ್ಯವಸ್ಥೆಯಿಂದ ಬೇಸತ್ತು ಬೇಶರತ್ತಾಗಿ ಕಾಂಗ್ರೆಸ್ ಸೇರುತ್ತಿದ್ದಾರೆ. ಅವರನ್ನು ಸ್ವಾಗತಿಸುತ್ತಿದ್ದು, ಶುಭವಾಗಲಿ ಎಂದು ಹಾರೈಸುತ್ತೇನೆ. ಇದೇ ರೀತಿ ಡಾ. ಶ್ರೀನಿವಾಸ್ ವೈದ್ಯ ವೃತ್ತಿ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ್ ಲೋಣಿ ಸಹ ಪಕ್ಷ ಸೇರ್ಪಡೆ ಆಗುತ್ತಿದ್ದಾರೆ. ಇವರು ಹಿಂದೆ ನಮ್ಮ ಪಕ್ಷದಲ್ಲಿಯೇ ಇದ್ದವರು. ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆ ಪಕ್ಷ ತ್ಯಜಿಸಿದ್ದರು. ಈಗ ಮತ್ತೊಮ್ಮೆ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ.
ಬಿಜೆಪಿಯಿಂದ ಗೆದ್ದು ಬಂದವರು ನೈತಿಕವಾಗಿ ಜನ ಬೆಂಬಲದೊಂದಿಗೆ ಗೆದ್ದು ಬಂದವರಲ್ಲ. ಅನೈತಿಕವಾಗಿ ಹಣದ ಬಲ ಪಡೆದು ಗೆದ್ದು ಬಂದಿದ್ದಾರೆ. ಲೂಟಿ ಹೊಡೆಯುವ ಉದ್ದೇಶದಿಂದ ಇವರು ಬಿಜೆಪಿ ಪಕ್ಷ ಸೇರ್ಪಡೆ ಆಗಿದ್ದಾರೆ. ಇದರಿಂದಾಗಿ ನಾಡಿನ ಜನರೇ ಇಂದು ಬಿಜೆಪಿ ಸರ್ಕಾರವನ್ನು 40% ಸರ್ಕಾರ ಎಂದು ಲೇವಡಿ ಮಾಡುತ್ತಿದ್ದಾರೆ. ಈ ಸರ್ಕಾರದಲ್ಲಿ ಯಾವ ಕೆಲಸವೂ ದುಡ್ಡಿಲ್ಲದೆ ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಮುಖ್ಯಮಂತ್ರಿ ಆದಿಯಾಗಿ ಎಲ್ಲಾ ಸಚಿವರು ರಾಜ್ಯವನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಇದರ ಜೊತೆಗೆ ಸಾಮರಸ್ಯವನ್ನು ಕದಡುತ್ತಿದ್ದು, ದುರ್ಬಲ ವರ್ಗದವರು ಹೆದರುತ್ತಿದ್ದಾರೆ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯ ನಾಶವಾಗುತ್ತದೆ. ಮುಂದಿನ ಚುನಾವಣೆಯಲ್ಲಿ ನಾವು ಇವರನ್ನು ಸೋಲಿಸಲೇಬೇಕು. ಹಿರೇಕೆರೂರು ಕ್ಷೇತ್ರ ಸೇರಿದಂತೆ ಎಲ್ಲೆಡೆ ಕಾಂಗ್ರೆಸ್ಸನ್ನು ಗೆಲ್ಲಿಸಬೇಕು. ಇಂಥ ಕೆಟ್ಟ ಸರ್ಕಾರವನ್ನು ನನ್ನ ರಾಜಕೀಯ ಇತಿಹಾಸದಲ್ಲಿಯೇ ನೋಡಿರಲಿಲ್ಲ ಎಂದು ಗುಡುಗಿದರು.
ಬಿಜೆಪಿ ಸರ್ಕಾರವನ್ನ ಸೋಲಿಸುವುದು ನಮ್ಮ ಮುಂದಿರುವ ಸವಾಲು. ಯುಬಿ ಬಣಕಾರ್ ಸೇರ್ಪಡೆಯಿಂದ ಹಿರೇಕೆರೂರು ಕ್ಷೇತ್ರದಲ್ಲಿ ನಮ್ಮ ಬಲ ಹೆಚ್ಚಾಗಿದೆ. ಬಿ ಸಿ ಪಾಟೀಲ್ ವಿರುದ್ಧ ಸೆಣಸಲು ಪಕ್ಷಕ್ಕೆ ಇನ್ನಷ್ಟು ಶಕ್ತಿ ಬಂದಿದೆ. ನಮ್ಮ ಹಾಗೂ ಬಣಕಾರ್ ಶಕ್ತಿ ಸೇರಿ ಅಲ್ಲಿ ನಮಗೆ ಗೆಲುವು ಸಿಗುವ ವಿಶ್ವಾಸ ಇದೆ. ಬಿ ಸಿ ಪಾಟೀಲ್ ಸಹ ಆಪರೇಷನ್ ಕಮಲಕ್ಕೆ ಒಳಗಾದವರು. ಮಂತ್ರಿ ಆಗಬೇಕು ಹಾಗೂ ದುಡ್ಡಿನ ಆಸೆಗೋಸ್ಕರ ಅವರು ಕಾಂಗ್ರೆಸ್ಸನ್ನು ತ್ಯಜಿಸಿದರು ಎಂದು ಆರೋಪಿಸಿದರು.
ಇಂಥವರು ಜನಪ್ರತಿನಿಧಿಗಳು ಆಗಲು ಲಾಯಕ್ಕಾ? ಇದರಿಂದಾಗಿ ಬಿಜೆಪಿಯನ್ನು ಹೊಡೆದುರುಳಿಸಿ ಕಾಂಗ್ರೆಸ್ಸನ್ನು ಗೆಲ್ಲಿಸಬೇಕು ಎಂದು ಸ್ಥಳೀಯ ನಾಗರಿಕರಲ್ಲಿ ಮನವಿ ಮಾಡುತ್ತೇನೆ. ಇದೇ ರೀತಿ ಶ್ರೀನಿವಾಸ್ ಹಾಗೂ ಮಲ್ಲಿಕಾರ್ಜುನ ಲೋಣಿ ಸೇರ್ಪಡೆಯಿಂದ ಸ್ಥಳೀಯವಾಗಿ ನಮ್ಮ ಬಲ ಹೆಚ್ಚಾಗಿದೆ. ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ಕಾರ್ಯ ಮಾಡಿ. ಸಾಕಷ್ಟು ಮಂದಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬೇರೆ ಪಕ್ಷದಿಂದ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದಾರೆ.
ಈಗ ಮರಳಿ ಹಲವು ನಾಯಕರು ಕಾಂಗ್ರೆಸ್ಗೆ ಸೇರ್ಪಡೆ ಆಗಲು ಬಯಸುತ್ತಿದ್ದಾರೆ. ಅಗತ್ಯ ಸಂದರ್ಭ ನೋಡಿ ಸೇರ್ಪಡೆಗೆ ಕ್ರಮ ಕೈಗೊಳ್ಳುತ್ತೇವೆ. ನಾವೆಲ್ಲ ಸೇರಿ ಭಾರತೀಯ ಜನತಾ ಪಕ್ಷವನ್ನು ಸೋಲಿಸೋಣ ಎಂಬ ಸಂಕಲ್ಪ ತೊಡೋಣ ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಇದನ್ನೂ ಓದಿ:ಮಹಾನಗರ ಪಾಲಿಕೆಗೆ ಮತದಾರ ಪಟ್ಟಿ ಪರಿಷ್ಕರಣೆಯಲ್ಲಿ ಅನುಭವದ ಕೊರತೆ ಇದೆ : ಬಸನಗೌಡ ಪಾಟೀಲ ಯತ್ನಾಳ್