ಬೆಂಗಳೂರು: ನ.17ರಿಂದ 19ರವರೆಗೆ ನಗರದಲ್ಲಿ ನಡೆಯಲಿರುವ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ (ಬಿಟಿಎಸ್-2021) ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್ ಸಂಸ್ಥಾನ, ವಿಯಟ್ನಾಂ, ಯೂರೋಪಿಯನ್ ಯೂನಿಯನ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಪಾಲ್ಗೊಳ್ಳುತ್ತಿವೆ ಎಂದು ಐಟಿ, ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರದ ಜಾಗತಿಕ ನಾವೀನ್ಯತಾ ಮೈತ್ರಿಕೂಟವು ( government's global innovation alliance )(ಜಿಐಎ) ಕೈಗೊಂಡಿರುವ ರಚನಾತ್ಮಕ ಕ್ರಮಗಳಿಂದಾಗಿ 30ಕ್ಕೂ ಹೆಚ್ಚು ದೇಶಗಳೊಂದಿಗೆ ಶಿಕ್ಷಣ, ನವೋದ್ಯಮ, ಸಂಶೋಧನೆ ಹಾಗೂ ಅಭಿವೃದ್ಧಿ ಸಹಭಾಗಿತ್ವಕ್ಕೆ ಮುಂದಡಿ ಇಡಲಾಗಿದೆ.
ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಇದೇ ಪ್ರಥಮ ಬಾರಿಗೆ ಅಮೆರಿಕ-ಭಾರತ(America-India) ವಾಣಿಜ್ಯ ಸಮಿತಿ ಮತ್ತು ವರ್ಚುಯಲ್ ರೂಪದಲ್ಲಿ ಆಸ್ಟ್ರೇಲಿಯಾದ ಸಿಡ್ನಿ ವಾಣಿಜ್ಯ ವಿಚಾರ ವಿನಿಮಯ ಶೃಂಗಸಭೆಯ ಮತ್ತು ಬಿಟಿಎಸ್ ಪ್ರತಿನಿಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಸಂಘಟನೆಗಳು ರಾಜ್ಯದೊಂದಿಗೆ ತಮ್ಮ ತಂತ್ರಜ್ಞಾನ ಪರಿಣತಿಯನ್ನು ಪರಸ್ಪರ ನೆಲೆಯಲ್ಲಿ ಪ್ರದರ್ಶಿಸಲಿವೆ ಎಂದರು.
ಜಾಗತಿಕ ಹೂಡಿಕೆ ಮೈತ್ರಿಕೂಟದ ಭಾಗವಾಗಿ ಆಸ್ಟ್ರೇಲಿಯಾ ನ್ಯೂಸೌತ್ ವೇಲ್ಸ್ (Australia New South Wales)ಪ್ರಾಂತ್ಯದ ಉದ್ಯೋಗ, ಹೂಡಿಕೆ ಮತ್ತು ಪ್ರವಾಸೋದ್ಯಮ ಸಚಿವ ಸ್ಟುವರ್ಟ್ ಏಯರ್ಸ್, ಜರ್ಮನಿಯ ನಾರ್ತ್ ರೀನ್-ವೆಸ್ಟ್ ಫಾಲಿಯಾ ಪ್ರಾಂತ್ಯದ ಆರ್ಥಿಕ, ನಾವೀನ್ಯತೆ ಮತ್ತು ಡಿಜಿಟಲೀಕರಣ ಸಚಿವ ಪ್ರೊ.ಆಂಡ್ರಿಯಾಸ್ ಪಿಂಕ್ ವರ್ಟ್, ಫಿನ್ಲೆಂಡಿನ ಸಾರಿಗೆ ಮತ್ತು ಸಂಪರ್ಕ ಸಚಿವ ಟಿಮೋ ಹರಕ್ಕಾ ಹಾಗೂ ವಿಯಟ್ನಾಂನ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯ ಮಾಜಿ ಸಚಿವ ನುಯೆನ್ ಕ್ವಾನ್ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ತಮ್ಮ ತಾಂತ್ರಿಕ ಪರಿಣತಿಗೆ ಹೆಸರಾಗಿರುವ ಅಮೆರಿಕದ ದಾವೋಸ್‌ನಲ್ಲಿರುವ ವಿಶ್ವ ಆರ್ಥಿಕ ವೇದಿಕೆಯ (World Economic Forum in Davos, USA)(ಡಬ್ಲ್ಯುಎಎಫ್) ಸಂಸ್ಥಾಪಕ ಮತ್ತು ಮುಖ್ಯಸ್ಥ ಪ್ರೊ.ಕ್ಲಾಸ್ ಶ್ವಾಬ್, ಭಾರತೀಯ ಮೂಲದ ವಿಜ್ಞಾನಿ ಮತ್ತು ಲೇಖಕ ಡಾ.ಸಿದ್ಧಾರ್ಥ ಮುಖರ್ಜಿ(Scientist and author Dr.Siddhartha Mukherjee), ಚೆಕ್ ಪಾಯಿಂಟ್ ಕಂಪನಿಯ ಸ್ಥಾಪಕ ಮತ್ತು ಸಿಇಒ ಗಿಲ್ ಶ್ವೆಡ್, ಆಪರೇಷನ್ಸ್ ಆಪಲ್ ಇಂಕ್ ಸಮೂಹದ ಉಪಾಧ್ಯಕ್ಷೆ ಪ್ರಿಯಾ ಬಾಲಸುಬ್ರಹ್ಮಣ್ಯಂ, ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ, ಕಿಂಡ್ರೈಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಮತ್ತು ಟೆಲ್ಸ್ಟ್ರಾ ಕಂಪನಿಯ ಪಾಲುದಾರ ಗ್ಯಾವೆನ್ ಸ್ಟ್ಯಾಂಡನ್ ಸೇರಿದಂತೆ 75ಕ್ಕೂ ಹೆಚ್ಚು ಆಹ್ವಾನಿತರು ವಿಚಾರಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣಕ್ಕೆ ಒತ್ತು :ಬಿಟಿಎಸ್-2021ರಲ್ಲಿ ಮುಖ್ಯವಾಗಿ ಸೈಬರ್ ಸೆಕ್ಯುರಿಟಿ, ಡಿಜಿಟಲೀಕರಣ, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್ ಮತ್ತು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಅತ್ಯಾಧುನಿಕ ತಂತ್ರಜ್ಞಾನಗಳ ಕಡೆಗೆ ಗಮನ ಹರಿಸಲಾಗುವುದು ಎಂದರು.
ಈ ಬಾರಿಯ ಶೃಂಗದಲ್ಲಿ ಆಸ್ಟ್ರೇಲಿಯಾ, ಪೆನ್ಸಿಲ್ವೇನಿಯಾ, ಯುನೈಟೆಡ್ ಕಿಂಗ್ ಡಂ, ಟೊರಾಂಟೋ ಬ್ಯುಸಿನೆಸ್ ಡೆವಲಪ್ಮೆಂಟ್ ಸೆಂಟರ್, ಜರ್ಮನಿ ಮತ್ತು ಅಮೆರಿಕ ದೇಶಗಳ ವರ್ಚುಯಲ್ ಬೂತ್‌ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರು ನೆಕ್ಸ್ಟ್ ಸಿಇಒ ಸಮಾವೇಶ :ಬಿಟಿಎಸ್-2021ರಲ್ಲಿ ನ.17 ಮತ್ತು 18ರಂದು ಸಂಜೆ 5ರಿಂದ 7 ಗಂಟೆಯವರೆಗೆ ಬೆಂಗಳೂರಿನಲ್ಲಿ ತಂತ್ರಜ್ಞಾನ ಬೆಳವಣಿಗೆಗೆ ಸಂಬಂಧಿಸಿದಂತೆ ಇಡಬೇಕಾದ ಮುಂದಿನ ಹೆಜ್ಜೆಗಳ ಕುರಿತು `ಬೆಂಗಳೂರು ನೆಕ್ಸ್ಟ್ ಸಿಇಒ’ ಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಇದರಲ್ಲಿ ಮೊದಲನೇ ದಿನ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಬಾಷ್ ಕಂಪನಿ ಸಿಇಒ ದತ್ತಾತ್ರಿ ಸಾಲಗಾಮೆ, ಕ್ರಿಸ್ ಗೋಪಾಲಕೃಷ್ಣನ್, ಕಿಂಡ್ರೈಲ್ ಇಂಡಿಯಾದ ಮುಖ್ಯಸ್ಥ ಲಿಂಗರಾಜು ಸಾಹುಕಾರ್ ಮತ್ತು ಕ್ರಿಸ್ ಗೋಪಾಲಕೃಷ್ಣನ್ ಮಾತನಾಡಲಿದ್ದಾರೆ ಎಂದು ವಿವರಿಸಿದರು.