ಶಾಲಾ ಕಟ್ಟಡದ ಸೆಂಟ್ರಿಂಗ್ ಕುಸಿತ ಆನೇಕಲ್(ಬೆಂಗಳೂರು ಗ್ರಾಮಾಂತರ): ನಿರ್ಮಾಣ ಹಂತದ ಖಾಸಗಿ ಶಾಲೆಯ ಎರಡನೇ ಮಹಡಿಯ ಸೆಂಟ್ರಿಂಗ್ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರ ಗಾಯಗೊಂಡ ಘಟನೆ ಆನೇಕಲ್ ತಾಲೂಕಿನ ಬ್ಯಾಡರಹಳ್ಳಿ ಮುಖ್ಯರಸ್ತೆ ಬಳಿ ಸಂಭವಿಸಿದೆ. ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಸೆಂಟ್ ಆನ್ಸ್ ಕ್ರಿಶ್ಚಿಯನ್ ಮಿಷನರಿ ಶಾಲಾ ಕಟ್ಟಡ ಕಾಮಗಾರಿ ವೇಳೆ ದುರಂತ ನಡೆಯಿತು.
ಘಟನೆಯಲ್ಲಿ ಮೃತಪಟ್ಟವರನ್ನು ಪಶ್ಚಿಮ ಬಂಗಾಳದ ಸಾಹಿದ್ (31) ಹಾಗೂ ಮಿನಾರ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಉಳಿದ ಗಾಯಾಳುಗಳು ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗದವರು ಎಂದು ತಿಳಿದುಬಂದಿದೆ.
ಬೆಳಿಗ್ಗೆ ಸುಮಾರು 25 ಮಂದಿ ಕಾರ್ಮಿಕರು ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಎರಡನೇ ಅಂತಸ್ತಿನ ಸೆಂಟ್ರಿಂಗ್ ಹಾಕುವಾಗ ದಿಢೀರ್ ಕುಸಿದಿದೆ. 15 ಮಂದಿ ಕಾರ್ಮಿಕರು ಸೆಂಟ್ರಿಂಗ್ ಮೇಲಿದ್ದರು. ಈ ವೇಳೆ ಭಾರ ತಾಳಲಾರದೆ ಕುಸಿದಿರುವ ಸಾಧ್ಯತೆ ಇದೆ. ಸೆಂಟ್ರಿಂಗ್ ಕೆಳಗಡೆ ಸಿಲುಕಿದ್ದ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 11 ಜನರನ್ನು ಇತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಎಸ್ಡಿಆರ್ಎಫ್ ತಂಡ, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಮೋಹನ್ ಕುಮಾರ್, ಇನ್ಸ್ಪೆಕ್ಟರ್ ಎಸ್.ಎಂ.ಚಂದ್ರಪ್ಪ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
''ಬೆಳಿಗ್ಗೆಯೇ ಕೆಲಸ ಆರಂಭಿಸಿದರೆ, ಬೇಗ ಕೆಲಸ ಸಾಗುತ್ತದೆ. ಹೀಗಾಗಿ ಬೇಗ ಕೆಲಸ ಶುರು ಮಾಡಿದ್ದೆವು. ಆದರೆ ಇದ್ದಕ್ಕಿದ್ದಂತೆ ಘಟನೆ ನಡೆದುಹೋಯಿತು'' ಎಂದು ಗಾಯಾಳು ಕಾರ್ಮಿಕ ನವೀನ್ ಹೇಳಿದರು.
ಎಸ್ಪಿ ಪ್ರತಿಕ್ರಿಯೆ: ''ಬೆಳಿಗ್ಗೆ 7 ಗಂಟೆ ಸುಮಾರಿಗೆ ಶಾಲೆಯ ಎರಡನೇ ಅಂತಸ್ತಿನ ನಿರ್ಮಾಣದ ವೇಳೆ ಸೆಂಟ್ರಿಂಗ್ ಕುಸಿತಗೊಂಡಿದೆ. ಸುಮಾರು 25 ಜನ ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದರು. ಘಟನೆಯಲ್ಲಿ ಪಶ್ಚಿಮ ಬಂಗಾಳದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಉಳಿದ ಹನ್ನೊಂದು ಜನರನ್ನು ಆನೇಕಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಇಬ್ಬರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಕಬ್ಬಣದ ಸರಳುಗಳನ್ನು ಸರಿಯಾಗಿ ಹಾಕದ ಕಾರಣ ಸಿಮೆಂಟ್ ಕಾಂಕ್ರೀಟ್ ಹಾಕಿದ ತಕ್ಷಣ ಸೆಂಟ್ರಿಂಗ್ ಕುಸಿದಿರುವ ಸಾಧ್ಯತೆ ಇದೆ. ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. 15 ಜನ ಮೇಲೆ ನಿಂತು ಕಾಂಕ್ರಿಟ್ ಹಾಕುವ ಕಾರ್ಯದಲ್ಲಿ ತೊಡಗಿದ್ದರು. ಇನ್ನುಳಿದವರು ಕೆಳಗಡೆ ನಿಂತು ಕೆಲಸಕ್ಕೆ ಇತರ ಸಹಾಯ ಮಾಡುತ್ತಿದ್ದರು. ಕಾಮಗಾರಿಯ ಅವಶೇಷಗಳನ್ನು ತೆಗೆದು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ'' ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.
ಇದನ್ನೂ ಓದಿ:ಬಿಬಿಎಂಪಿ ಅಧೀನದ ನರ್ಸರಿ ಸ್ಕೂಲ್ ಕಟ್ಟಡ ಕುಸಿತ ; ತಪ್ಪಿದ ಭಾರಿ ಅನಾಹುತ