ಬೆಂಗಳೂರು:ಇತ್ತೀಚಿಗೆ ದೂರುದಾರ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪಕ್ಕೆ ಸಿಲುಕಿರುವ ಹೆಣ್ಣೂರು ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಮತ್ತೊಂದು ದೂರು ಸಲ್ಲಿಕೆಯಾಗಿದೆ.
ತಮ್ಮ ಮೇಲೆ ದುಷ್ಕರ್ಮಿಗಳು ಗಂಭೀರ ಹಲ್ಲೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಿ ನಗರದ ಕಮ್ಮನಹಳ್ಳಿಯ ಎರಡನೇ ಬ್ಲಾಕ್ ನಿವಾಸಿಗಳಿಬ್ಬರು ದೂರು ಸಲ್ಲಿಸಿದ್ದರು. ಹಲ್ಲೆ ನಡೆಸಿದ ದುಷ್ಕರ್ಮಿಗಳ ಪರ ನಿಂತಿರುವ ಹೆಣ್ಣೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ವಸಂತ್ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳವಂತೆ ಮನವಿ ಮಾಡಿದ್ದಾರೆ.
ಕಳೆದ ವರ್ಷದ ಏ. 26 ರಂದು ಸ್ಥಳೀಯ ಬಿಜೆಪಿ ನಾಯಕ ಕೃಷ್ಣ ಆನಂದ್, ಸರಿತಾ ಬಾಯಿ, ಪುಪ್ಪಾ, ಮಹೇಂದ್ರ, ಲತಾ ಎಂಬುವವರು ಸೇರಿದಂತೆ 40 ಮಂದಿ ನಿವೇಶನ ಕುರಿತ ವಿಚಾರವಾಗಿ ಉದ್ದೇಶಪೂರ್ವಕವಾಗಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಚಿನ್ನಾಭರಣ, ನಗದು ಹಾಗೂ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿತ್ತು. ಆದರೆ ಇದುವರೆಗೂ ಯಾವುದೇ ಕ್ರಮವನ್ನು ಪೊಲೀಸರು ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.