ಬೆಂಗಳೂರು: ಮತದಾರರ ವೈಯಕ್ತಿಕ ಮಾಹಿತಿ ಸಂಗ್ರಹ ಪ್ರಕರಣ ತನಿಖೆ ಚುರುಕುಗೊಳಿಸಿರುವ ಹಲಸೂರು ಗೇಟ್ ಪೊಲೀಸರು ಕರ್ತವ್ಯಲೋಪದಡಿ ಸಸ್ಪೆಂಡ್ ಆಗಿರುವ ಇಬ್ಬರು ಐಎಎಸ್ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಎರಡು ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ಆಡಳಿತ ಹಾಗೂ ಚುನಾವಣೆ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ಶ್ರೀನಿವಾಸ್ ಅವರನ್ನು ಕರ್ತವ್ಯಲೋಪದಡಿ ರಾಜ್ಯ ಚುನಾವಣಾ ಆಯೋಗ ನೀಡಿದ ವರದಿ ಆಧರಿಸಿ ಸರ್ಕಾರ ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ಚಿಲುಮೆ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೂ 14 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಿರಿಯ ಅಧಿಕಾರಿಗಳ ಮೇಲೆ ಹಲವು ಅನುಮಾನಗಳು ವ್ಯಕ್ತವಾಗಿದ್ದವು ಎಂದು ತಿಳಿದುಬಂದಿದೆ.