ಅಪಘಾತದ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸುಮನಾ ಮಾಹಿತಿ ಬೆಂಗಳೂರು:ಎರಡು ಬೈಕ್ಗಳ ಮಧ್ಯೆ ಭೀಕರ ಅಪಘಾತವಾಗಿ ಇಬ್ಬರು ಮೃತಪಟ್ಟಿದ್ದು, ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ನಡೆದಿದೆ. ನರಸಪ್ಪ, ರಕ್ಷಾ ಮೃತರು ಎಂದು ಗುರುತಿಸಲಾಗಿದೆ. ಗಾಯಾಳು ಚಂದನ್ ಎಂಬಾತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ:ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಉಲ್ಲಾಳದ ಮಾರುತಿನಗರ ಮುಖ್ಯರಸ್ತೆಯ ಕೆಎಲ್‌ಇ ಕಾಲೇಜು ಮಾರ್ಗದಲ್ಲಿ ಮಂಗಳವಾರ ರಾತ್ರಿ 11.30 ರ ಸುಮಾರಿಗೆ ಚಂದನ್ ಮತ್ತು ರಕ್ಷಾ ಪಲ್ಸರ್ ಬೈಕ್ನಲ್ಲಿ ವೇಗವಾಗಿ ತೆರಳುತ್ತಿದ್ದರು. ಈ ವೇಳೆ ಅದೇ ರಸ್ತೆಯಲ್ಲಿ ಎದುರುಗಡೆಯಿಂದ ಇನ್ನೊಂದು ಬೈಕ್ನಲ್ಲಿ ಬಂದ ನರಸಪ್ಪ ಎಂಬುವರಿಗೆ ಚಂದನ್ ಬೈಕ್ ರಭಸವಾಗಿ ಡಿಕ್ಕಿ ಹೊಡೆದಿದೆ.
ಇದರ ಪರಿಣಾಮ ನರಸಪ್ಪಗೆ ಗಂಭೀರ ಗಾಯವಾಗಿ ಘಟನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಂದನ್ ಹಾಗೂ ರಕ್ಷಾ ಇಬ್ಬರೂ ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನೂ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೇ ರಕ್ಷಾ ಸಾವನ್ನಪ್ಪಿದ್ದಾರೆ. ಗಾಯಾಳು ಚಂದನ್ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.
ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಸುಮನಾ ಅವರು ಪ್ರತಿಕ್ರಿಯಿಸಿ, ನಿನ್ನೆ ರಾತ್ರಿ ಬೈಕ್ಗಳ ಮಧ್ಯೆ ಡಿಕ್ಕಿಯಾಗಿ ಶಿಕ್ಷಕ ನರಸಪ್ಪ, ಕಿಂಡರ್ ಗಾರ್ಟನ್ನಲ್ಲಿ ಶಿಕ್ಷಕಿಯಾಗಿದ್ದ ರಕ್ಷಾ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಾಳು ಚಂದನ್ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ಮೇಲ್ನೋಟಕ್ಕೆ ಚಂದನ್ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ. ಪಲ್ಸರ್ ಬೈಕ್ ಡಿಕ್ಕಿ ಹೊಡೆದು 50 ಮೀಟರ್ನಷ್ಟು ರಸ್ತೆ ಮೇಲೆ ಉಜ್ಜಿಕೊಂಡು ಹೋಗಿದೆ. ಸವಾರ ಚಂದನ್ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಲಾರಿ ಡಿಕ್ಕಿಯಾಗಿ 6 ಮಂದಿ ಸಾವು:ತೆಲಂಗಾಣದ ವರಂಗಲ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ನಡೆದ ರಸ್ತೆ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಸಂಭವಿಸಿದೆ. ವರಂಗಲ್ ಕಡೆಯಿಂದ ತೋರೂರು ಕಡೆಗೆ ಹೋಗುತ್ತಿದ್ದ ಆಟೋಗೆ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಆಟೋದಲ್ಲಿದ್ದ ಏಳು ಮಂದಿ ಪೈಕಿ ಆರು ಜನರು ದಾರುಣ ಅಂತ್ಯ ಕಂಡಿದ್ದಾರೆ. ಆಟೋ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾರೆ. ಇನ್ನೋರ್ವನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:Crime: ತಮ್ಮ ಮಾಡಿದ ತಪ್ಪಿಗೆ ಅಕ್ಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೆ ಯತ್ನ.. ಇಬ್ಬರು ಆರೋಪಿಗಳು ಅರೆಸ್ಟ್