ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗಳಿಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು(ಮಂಗಳವಾರ) ಬೆಳಗ್ಗೆ ನಡೆದಿದೆ. ಮೈಸೂರಿನ ಪ್ರಕಾಶ್ ಹಾಗೂ ಬನಶಂಕರಿ ಮೂಲದ ನಾಗೇಂದ್ರ ಮೃತ ದುದೈರ್ವಿಗಳು.
ಅಪಘಾತವೆಸಗಿದ ಆಂಬುಲೆನ್ಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ವಾಹನವನ್ನ ವಶಕ್ಕೆ ಪಡೆದುಕೊಳ್ಳಲಾಗಿದೆ. ಚಿಕ್ಕಜಾಲ ಬಳಿಯ ತರಳುಬಾಳು ರಸ್ತೆಯಲ್ಲಿ ಇಂದು ಬೆಳಗ್ಗೆ ದುರ್ಘಟನೆ ನಡೆದಿದೆ. ಇಬ್ಬರು ನಡೆದುಕೊಂಡು ಹೋಗುವಾಗ ವೇಗವಾಗಿ ಬಂದ ಆಂಬುಲೆನ್ಸ್ ವಾಹನ ಡಿಕ್ಕಿ ಹೊಡೆದಿದೆ. ಅಪಘಾತ ರಭಸಕ್ಕೆ ಪ್ರಕಾಶ್ ಸ್ಥಳದಲ್ಲಿ ಮೃತಪಟ್ಟಿರೆ. ಮತ್ತೊಬ್ಬರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಆಂಬುಲೆನ್ಸ್ ನಲ್ಲಿ ರೋಗಿ ಇಲ್ಲದಿದ್ದರೂ ವೇಗವಾಗಿ ಚಾಲನೆ ಮಾಡಿದ ಚಾಲಕ, ಇಬ್ಬರ ಸಾವಿಗೆ ಕಾರಣನಾಗಿದ್ದಾನೆ. ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂಟಿಮನೆಗೆ ನುಗ್ಗಿ ದರೋಡೆ ಮಾಡಿದ್ದ ಏಳು ಜನ ಆರೋಪಿಗಳ ಬಂಧನ:ಒಂಟಿ ಮನೆಗೆ ನುಗ್ಗಿ ಡಕಾಯಿತಿ ಮಾಡಿದ್ದ ಗ್ಯಾಂಗನ್ನ ಬೆಂಗಳೂರಿನ ಸೋಲದೇವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ರೌಡಿಗಳಾದ ನಿತೇಶ್, ಕಿಶನ್, ಶಿವರಾಜ್ ಹಾಗೂ ಸಾಗರ್, ಮನು ಜಂಗಮ್, ರಂಜಿತ್ ಕುಮಾರ್, ಅನಿಲ್ ಬಂಧಿತ ಆರೋಪಿಗಳು. ಮಾರ್ಚ್ 12ರಂದು ಸೋಲದೇವನಹಳ್ಳಿಯ ದೊಡ್ಡ ಬ್ಯಾಲ್ದ್ ಕೆರೆ ಮುಖ್ಯರಸ್ತೆಯ ನಾಲ್ವರು ವಾಸವಿದ್ದ ಒಂಟಿ ಮನೆಗೆ ಬಂದು ಬಾಗಿಲು ತಟ್ಟಿದ್ದ ಆರೋಪಿಗಳು, ಮನೆಯವರು ಬಾಗಿಲು ತೆಗೆದ ತಕ್ಷಣ ಮುಖಕ್ಕೆ ಪೆಪ್ಪರ್ ಸ್ಪ್ರೇ ಮಾಡಿ ಒಳನುಗ್ಗಿದ್ದರು. ಬಳಿಕ ಮನೆಯಲ್ಲಿದ್ದ ಸದಸ್ಯರ ಕೈ ಕಾಲು ಕಟ್ಟಿ ಹಾಕಿದ್ದರು. ಈ ವೇಳೆ ಪ್ರತಿರೋಧವೊಡ್ಡಿದ್ದ ಬಿಹಾರಿ ಗೋಸ್ವಾಮಿ ಎಂಬಾತನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮನೆಯಲ್ಲಿದ್ದ ನಗದು ಮತ್ತು ಮೊಬೈಲ್ ಫೋನ್‌ಗಳನ್ನ ದೋಚಿ ಪರಾರಿಯಾಗಿದ್ದರು.