ಬೆಂಗಳೂರು :ಈ ವರ್ಷ ಕಲ್ಯಾಣ ಕರ್ನಾಟಕ ಹಾಗೂ ಮದ್ಯ ಕರ್ನಾಟಕ ಭಾಗದಲ್ಲಿ ಎರಡು ಎನ್.ಸಿ.ಸಿ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿಳಿಸಿದರು. ನವದೆಹಲಿಯಲ್ಲಿ ಜ. 26 ರಂದು ನಡೆದಿದ್ದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಹಾಗೂ ಗೋವಾ ರಾಜ್ಯ ಎನ್ ಸಿ ಸಿ ಕೆಡೆಟ್ ಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಎಂ ಮಾತನಾಡಿದರು. ಎನ್ ಸಿಸಿ ಶಿಬಿರಕ್ಕಾಗಿ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು. ಎನ್ ಸಿ ಸಿ ಕೆಡೆಟ್ಗಳು ಗಣ ರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡು ಕರ್ನಾಟಕ ಹಾಗೂ ಗೋವಾ ರಾಜ್ಯ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವುದು ಸುಲಭವಲ್ಲ. 95 ಸಾವಿರ ಕೆಡೆಟ್ ಗಳ ಪೈಕಿ 111 ಮಾತ್ರ ಆಯ್ಕೆಯಾಗಿದ್ದು, ಇದು ನಿಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದರು.
ಎನ್ ಸಿ ಸಿ ಸೇರುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ :ಅತ್ಯಂತ ಬಲಿಷ್ಠ, ಯುವ ಪರೇಡ್ನ್ನು ಕಟ್ಟುವ ಉದ್ದೇಶದಿಂದ ಎನ್ ಸಿ ಸಿ 1947 ರಿಂದಲೂ ಅಸ್ತಿತ್ವಕ್ಕೆ ಬಂದಿತು. ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಶಿಸ್ತು ಇದ್ದರೆ ವ್ಯಕ್ತಿತ್ವ ಬೆಳೆಯುತ್ತದೆ. ದೇಶಕ್ಕೆ ಚಾರಿತ್ರ್ಯ ಅಗತ್ಯ. ದೇಶಕ್ಕೆ ಚರಿತ್ರೆ ಇದೆ, ಆದರೆ ಚಾರಿತ್ರ್ಯ ಬೇಕಿದೆ ಎಂದು ಹೇಳಿದರು. ಆಚಾರ್ಯರನ್ನು ಹೊಂದಿದ್ದೇವೆ. ಆಚರಣೆ ಬೇಕಿದೆ. ಆಚರಣೆ ಎನ್ ಸಿ ಸಿಯಲ್ಲಿದೆ ಎಂದು ಅಭಿಪ್ರಾಯ ಪಟ್ಟರಲ್ಲದೇ, ಆಧುನಿಕ ಜಗತ್ತಿನಲ್ಲಿ ಎನ್ಸಿಸಿಗೆ ಸೇರುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಅದರಿಂದ ಅಧಿಕಾರಿಗಳು ಎನ್ ಸಿ ಸಿ ಸೇರುವಂತೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಬೇಕು ಎಂದು ಹೇಳಿದರು.
ಕರ್ನಾಟಕ ಹಾಗೂ ಗೋವಾ ರಾಜ್ಯ ಎನ್ ಸಿ ಸಿ ಕೆಡೆಟ್ಗಳೊಂದಿಗೆ ಸಿಎಂ ಎನ್ ಸಿ ಸಿ ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಬೇಕು. ಬೆಟಾಲಿಯನ್ ಗಳನ್ನು ರೆಜಿಮೆಂಟ್ಗಳಾಗಿ ಕಟ್ಟಿದಂತೆಯೇ ಎನ್ ಸಿ ಸಿ ಯನ್ನೂ ರೆಜಿಮೆಂಟ್ ಗಳಾಗಿ ಬೆಳೆಸಬೇಕು. ಆಗ ಮಾತ್ರ ಎನ್ ಸಿ ಸಿ ಗೆ ಪ್ರಾಮುಖ್ಯತೆ ದೊರೆಯುತ್ತದೆ ಹಾಗೂ ಯುವಕರು ಸೇರ್ಪಡೆಯಾಗಲು ಉತ್ತೇಜನ ದೊರೆಯುತ್ತದೆ ಎಂದು ಸಿಎಂ ತಿಳಿಸಿದರು.
ಎನ್ ಸಿ ಸಿ ವ್ಯಕ್ತಿತ್ವ ವಿಕಸನಕ್ಕೆ ಕೂಡ ಸಹಕಾರಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ, ಗ್ರಾಮೀಣ ಪ್ರದೇಶಗಳಿಂದ ಸೇರ್ಪಡೆ ಯಾಗಿದ್ದಾರೆ. ಈ ಎಲ್ಲಾ ಮಕ್ಕಳೂ ಪ್ರತಿಭಾವಂತರು ಹಾಗೂ ಬುದ್ಧಿವಂತರಿದ್ದಾರೆ. ಅವರಲ್ಲಿ ಆತ್ಮವಿಶ್ವಾಸದ ಅಗತ್ಯವಿದೆ. ಇದು ಎನ್ ಸಿ ಸಿ ಯಿಂದ ಅವರಿಗೆ ದೊರೆಯುತ್ತದೆ. ಜೀವನದ ಸವಾಲುಗಳನ್ನು ಎದುರಿಸಬೇಕು. ಜೀವನವನ್ನು ನಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಸಲಹೆ ನೀಡಿದರು.
ಈ ವರ್ಷ ಹೊಸ 75 ಯುನಿಟ್ ಗಳ ಪ್ರಾರಂಭ :ಎನ್ ಸಿ ಸಿಯಲ್ಲಿ ಕಲಿತ ಧೈರ್ಯ, ಆತ್ಮವಿಶ್ವಾಸ ಜೀವನದಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ರಾಜ್ಯ ಸರ್ಕಾರ ಎನ್ ಸಿ ಸಿ ಗೆ ಅಗತ್ಯವಿರುವ ನೆರವು ನೀಡುತ್ತದೆ. ಕಳೆದ ವರ್ಷ ಸುಭಾಸಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ 75 ಹೊಸ ಯುನಿಟ್ ಆರಂಭಿಸುವುದಾಗಿ ಹೇಳಿದ್ದೆವು. ಈ ವರ್ಷ ಹೊಸದಾಗಿ 75 ಯುನಿಟ್ ಗಳು ಆರಂಭವಾಗಲಿವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಯೂನಿಟ್ ಗಳನ್ನು ಸೇರಿಸಲಾಗಿದೆ. ಎನ್ ಸಿ ಸಿಯನ್ನು ಪ್ರೌಢ ಶಾಲಾ ಮಟ್ಟಕ್ಕೆ ವಿಸ್ತರಿಸಬೇಕು. ಕರಾವಳಿಯಲ್ಲಿ ಈ ವರ್ಷ 2800 ಕ್ಕೂ ಹೆಚ್ಚು ಹೊಸ ಎನ್ ಸಿ ಸಿ ಕೆಡೆಟ್ಗಳು ಸೇರ್ಪಡೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ನಮ್ಮ ಪ್ರಧಾನ ಮಂತ್ರಿಗಳು ದೇಶ ಮೊದಲು ಎಂದು ಆಲೋಚಿಸುತ್ತಾರೆ. ದೇಶ ಆರ್ಥಿಕವಾಗಿ ಬೆಳೆಯಬೇಕೆಂಬ ಆಲೋಚನೆ ಹೊಂದಿದ್ದಾರೆ. ಈಗ ನಾವು ವಿಶ್ವದಲ್ಲಿ 5 ನೇ ಸ್ಥಾನದಲ್ಲಿದ್ದೇವೆ. ಹತ್ತು ವರ್ಷಗಳಲ್ಲಿ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪುವ ಗುರಿ ಹೊಂದಿದ್ದೇವೆ. ಅದಕ್ಕೆ ಯುವಕರ ಪಾತ್ರ ಬಹಳ ಮುಖ್ಯ. ದೇಶದ ಶೇ 46% ಜನಸಂಖ್ಯೆಯ ಯುವಕರು ನಮ್ಮ ದೇಶದ ಆಸ್ತಿ ಎಂದ ನಮ್ಮ ಪ್ರಧಾನಿ ದೇಶದ ಯುವಕರ ಸಾಮರ್ಥ್ಯ ಅರಿತು ಸ್ಕಿಲ್ ಇಂಡಿಯಾ ತರಬೇತಿ ಆರಂಭಿಸಿದರು. ಯುವಕರು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುವವರಿಗೆ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ :ವೃತ್ತ ಐಎಎಸ್ ಅಧಿಕಾರಿ ಮನೆಯಿಂದ ವಶಪಡಿಸಿಕೊಂಡಿದ್ದ ಹಣ ಹಿಂದಿರುಗಿಸಿ : ಹೈಕೋರ್ಟ್ ಆದೇಶ