ಬೆಂಗಳೂರು: ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಎಲ್ಲ ಸ್ಥಳಗಳಲ್ಲಿ ಮಳೆಯಾಗಿದೆ. ಇನ್ನೂ ಎರಡು ದಿನ ಭಾರಿ ಮಳೆಯಾಗಲಿದ್ದು ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ರಾಜ್ಯ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿಎಸ್ ಪಾಟೀಲ್ ತಿಳಿಸಿದ್ದಾರೆ.
ಇಂದು ಉಡುಪಿ ಜಿಲ್ಲೆಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಭದ್ರಾವತಿ, ಶಿವಮೊಗ್ಗದಲ್ಲಿ 6 ಸೆಂ.ಮಿ, ಧರ್ಮಸ್ಥಳದಲ್ಲಿ 5 ಸೆಂ.ಮೀ, ಬಾಳೆಹೊನ್ನೂರು, ಚಿಕ್ಕಮಗಳೂರಿನಲ್ಲಿ 4 ಸೆಂ.ಮೀ. ಮಳೆಯಾಗಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಹವಾಮಾನ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಸಿಎಸ್ ಪಾಟೀಲ್ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಅ. 23 ರಿಂದ 25 ರವರೆಗೆ ಭಾರಿ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅ. 23 ರಂದು ಬೆಂಗಳೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಮಳೆಯಾಗಲಿದ್ದು, ಇಲ್ಲೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದರು.
ಉತ್ತರ ಒಳನಾಡಿನಲ್ಲಿ ಅ.23 ರಂದು ಒಣಹವೆ ಮುಂದುವರೆಯಲಿದೆ. ಅ 24 ಶನಿವಾರದಂದು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗದ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಆಗುವ ಸಂಭವ ಹೆಚ್ಚಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅ.25 ರಿಂದ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಸಿಎಸ್ ಪಾಟೀಲ್ ತಿಳಿಸಿದ್ದಾರೆ.