ಬೆಂಗಳೂರು: ಕೋವಿಡ್ ಬೆಡ್ ಬ್ಲಾಕಿಂಗ್ ಪ್ರಕರಣ ಬಗೆದಷ್ಟು ಆಳವಾಗಿದ್ದು, ದಿನೇ ದಿನೆ ಬಂಧಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಎರಡು ದಿನಗಳ ಹಿಂದೆಯಷ್ಟೇ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನ ಬಂಧನವಾಗಿತ್ತು. ಇದರ ಬೆನ್ನಲ್ಲೇ ಅವ್ಯವಹಾರದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ವರುಣ್ ಹಾಗೂ ಯಶವಂತ ಕುಮಾರ್ ಬಂಧಿತ ಆರೋಪಿಗಳು. ಈ ಪೈಕಿ ವರುಣ್ ಬಿಬಿಎಂಪಿ ದಕ್ಷಿಣ ವಲಯ ಕೊವಿಡ್ ವಾರ್ ರೂಂ ಹೆಲ್ಪ್ ಲೈನ್ನಲ್ಲಿ ಕೆಲಸ ಮಾಡುತ್ತಿದ್ದ. ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ನಗರದ ಆಸ್ಪತ್ರೆಗಳಲ್ಲಿ ಬೆಡ್ ಅಭಾವ ಸೃಷ್ಟಿಯಾಗತೊಡಗಿತ್ತು. ಈ ಪರಿಸ್ಥಿತಿಯ ದುರ್ಬಳಕೆ ಮಾಡಿಕೊಂಡ ವರುಣ್, ಬೆಡ್ ಅಗತ್ಯವಿದ್ದವರ ಮೊಬೈಲ್ ನಂಬರ್ ಸಂಗ್ರಹಿಸಿ ಸ್ನೇಹಿತ ಯಶವಂತ ಕುಮಾರ್ ಮೂಲಕ ಕರೆ ಮಾಡಿಸುತ್ತಿದ್ದ. ಐಸಿಯುನಲ್ಲಿ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಬೆಡ್ ಕೊಡಿಸುವುದಾಗಿ ಭರವಸೆ ನೀಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ. ಬಳಿಕ ಬ್ಯಾಂಕ್ ಅಕೌಂಟ್ ನಂಬರ್ ನೀಡಿ ರೋಗಿಯ ಕುಟುಂಬಸ್ಥರಿಂದ ಹಣ ಹಾಕಿಸಿಕೊಳ್ಳುತ್ತಿದ್ದ. ಹಣ ಪಡೆದು ಸರ್ಕಾರಿ ಕೋಟಾದಡಿ ಬೆಡ್ ಬ್ಲಾಕ್ ಮಾಡಿಸುತ್ತಿದ್ದ. ಇದುವರೆಗೆ ಎಷ್ಟು ಮಂದಿಯಿಂದ ಆರೋಪಿಗಳು ಹಣ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಇದುವರೆಗೆ 12 ಜನರ ಬಂಧನವಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.