ಬೆಂಗಳೂರು :ನಗರದ ವಿವಿಧೆಡೆ ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತಾರಾಜ್ಯ ಖದೀಮರನ್ನು ಬಂಡೇಪಾಳ್ಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ತಿರಪತ್ತೂರು ಜಿಲ್ಲೆ ಜೋಲಾರ್‌ಪೇಟೆ ತಾಲೂಕು ಪಾಲಂಗೊಪ್ಪಂ ಗ್ರಾಮದ ನಿವಾಸಿ ತಬಾರಕ್ (22) ಹಾಗೂ ಜೋಲಾರ್‌ಪೇಟೆ ನಿವಾಸಿ ಮಹಮ್ಮದ್ ಶರೀಫ್ (27) ಬಂಧಿತ ಆರೋಪಿಗಳು. ಆರೋಪಿಗಳು ತಮಿಳುನಾಡಿನ ತಿರುಪತ್ತೂರಿನಿಂದ ಬಸ್ ಮತ್ತು ತಮಿಳುನಾಡಿನಲ್ಲಿ ಕಳವು ಮಾಡಿದ ಬೈಕ್‌ಗಳಲ್ಲಿ ರಾತ್ರಿ ವೇಳೆ ಬೆಂಗಳೂರಿನ ಬೊಮ್ಮನಹಳ್ಳಿಗೆ ಬಂದು ಮನೆಗಳ ಮುಂದೆ ನಿಲ್ಲಿಸಿರುವ ಬೈಕ್‌ಗಳನ್ನು ಕಳ್ಳತನ ಮಾಡುತ್ತಿದ್ದರು.
ಬೆಲೆ ಬಾಳುವ ಬೈಕ್‌ಗಳನ್ನು ಟಾರ್ಗೆಟ್ ಮಾಡಿ ಹ್ಯಾಂಡಲ್ ಲಾಕ್ ಮುರಿದು, ವೈರ್‌ಗಳನ್ನು ಡೈರೆಕ್ಟ್ ಮಾಡಿ ಕಳವು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಬಂಡೇಪಾಳ್ಯ ಪೊಲೀಸರು ತನಿಖೆ ಚುರುಕುಗೊಳಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ತಮಿಳುನಾಡಿನಲ್ಲಿ ಕಳವು ಮಾಡಿದ ಬೈಕ್‌ಗಳನ್ನು ಕರ್ನಾಟಕದಲ್ಲಿ ಹಾಗೂ ಕರ್ನಾಟಕದಲ್ಲಿ ಕಳವು ಮಾಡಿದ ಬೈಕ್‌ಗಳನ್ನು ತಮಿಳುನಾಡಿನಲ್ಲಿ ಮಾರಾಟ ಮಾಡುವ ಬಗ್ಗೆ ಸಂಚು ರೂಪಿಸಲಾಗಿತ್ತು ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯ ಬಂಧಿತರಿಂದ 6 ಲಕ್ಷ ರೂ. ಮೌಲ್ಯದ 10 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತ ಪವನ್ ಎನ್, ಬಂಡೇಪಾಳ್ಯ ಠಾಣೆ ಇನ್ಸ್ಸ್ಪೆಕ್ಟರ್ ಯೋಗೇಶ್, ಎಎಸ್‌ಐಗಳಾದ ಸುರೇಶ್, ಶ್ರೀನಿವಾಸ ಬಾಬು ಹಾಗೂ ಸಿಬ್ಬಂದಿ ಭಾಗಿಯಾಗಿದ್ದರು. ಇವರ ಕಾರ್ಯಕ್ಕೆ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀನಾಥ್ ಮಹದೇವ್ ಜೋಶಿ ಅಭಿನಂದನೆ ಸಲ್ಲಿಸಿದ್ದಾರೆ.