ಬೆಂಗಳೂರು:ನಗರದಲ್ಲಿ ಅತಿ ಹೆಚ್ಚು ಆಕ್ಟೀವ್ ಆಗಿದ್ದ 2 ಗ್ಯಾಂಗನ್ನು ಪೊಲೀಸರು ಅಂದರ್ ಮಾಡಿದ್ದಾರೆ. ಒಂದು ತಂಡ ಬೇಲ್ಗಾಗಿ ಹಫ್ತಾ ವಸೂಲಿಗೆ ಇಳಿದಿದ್ದರೆ, ಮತ್ತೊಂದು ತಂಡ ಶೋಕಿಗಾಗಿ ರಾಬರಿ ಮಾಡುತ್ತಿದ್ದ ಗ್ಯಾಂಗನ್ನು ಕೊಡಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಯಲಹಂಕ ಸುತ್ತಮುತ್ತ ರಸ್ತೆ ಬದಿಯಲ್ಲಿರುವ ಅಂಗಡಿ ಮುಂಗಟ್ಟುಗಳನ್ನ ಟಾರ್ಗೆಟ್ ಮಾಡಿಕೊಂಡು ಹಫ್ತಾ ವಸೂಲಿ ಮಾಡುತ್ತಿದ್ದ ಕುಖ್ಯಾತ ಪಾಪಣ್ಣ ಗ್ಯಾಂಗನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಪಾಪಣ್ಣ ಜೈಲಿನಲ್ಲಿರುವ ಹಿನ್ನೆಲೆ ಬೇಲ್ ಪಡೆದುಕೊಳ್ಳಲು ಹಣದ ಅಭಾವವಿದ್ದ ಕಾರಣ ಪಾಪಣ್ಣ ಸಹಚರರು ಹಫ್ತಾ ವಸೂಲಿಗೆ ಇಳಿದಿದ್ದಾರೆ.
ಅದೇ ರೀತಿ ಬಾಗಲೂರಿನ ಕಟ್ಟಿಗೇನಹಳ್ಳಿಯಲ್ಲಿ ವ್ಯಾಪಾರಿಯೊಬ್ಬರಿಗೆ ಧಮ್ಕಿ ಹಾಕಿದ್ದ ಪಾಪಣ್ಣನ ಸಹಚರರು ಹಣ ನೀಡುವಂತೆ ದುಂಬಾಲು ಬಿದ್ದಿದ್ದಾರೆ. ಇದಕ್ಕೆ ವ್ಯಾಪಾರಸ್ಥರು ಒಪ್ಪದೆ ಇದ್ದಾಗ ಚಾಕುವಿನಿಂದ ಇರಿದು ಗ್ಯಾಂಗ್ ಪರಾರಿಯಾಗಿತ್ತು. ಖಚಿತ ಮಾಹಿತಿ ಮೇರೆಗೆ ಪಾಪಣ್ಣ ಗ್ಯಾಂಗನ್ನು ಬಂಧಿಸಿರುವ ಯಲಹಂಕ ಪೊಲೀಸರು, ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.