ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಎನೇಬಲ್ ಸಿಸ್ಟಂನಡಿ (ಎಇಪಿಎಸ್) ಬಯೊಮೆಟ್ರಿಕ್ ಮೂಲಕ ಬ್ಯಾಂಕ್ ಖಾತೆಯಲ್ಲಿ ಹಣ ದೋಚುವ ಟ್ರೆಂಡ್ ಮಾಡಿಕೊಂಡಿರುವ ಸೈಬರ್ ಖದೀಮರು ಬೆಂಗಳೂರು ಮಾತ್ರವಲ್ಲದೆ ರಾಜ್ಯದಾದ್ಯಂತ ಜನರನ್ನು ವಂಚಿಸುತ್ತಿದ್ದಾರೆ. ಹೀಗೆ ರಾಜಧಾನಿ ಬೆಂಗಳೂರಿನಲ್ಲಿ ಬೆರಳಚ್ಚುಗಳನ್ನು ಅಕ್ರಮವಾಗಿ ಸಂಗ್ರಹಿಸಿ ಖಾತೆದಾರರರಿಗೆ ಅರಿವಿಲ್ಲದಂತೆ ಹಣ ದೋಚುತ್ತಿದ್ದ ಇಬ್ಬರು ಬಿಹಾರ ಮೂಲದ ಆರೋಪಿಗಳನ್ನು ಈಶಾನ್ಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ನಗರದ ನಾನಾ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 115 ಎಇಪಿಎಸ್ ವಂಚನೆ ಪ್ರಕರಣಗಳಲ್ಲಿ ಮೊದಲ ಬಾರಿಗೆ ಆರೋಪಿಗಳನ್ನು ಬಂಧಿಸಿದಂತಾಗಿದೆ. ಮೊಹಮ್ಮದ್ ಪರ್ವಾಜ್ ಹಾಗೂ ಅಬುಜರ್ ಬಂಧಿತರು. ಕಳೆದ ಮೂರು ವರ್ಷಗಳಿಂದ ಕಸ್ಟಮರ್ ಸರ್ವಿಸ್ ಸೆಂಟರ್ ನಡೆಸುತ್ತಿದ್ದರು. ಆಧಾರ್ ಕಾರ್ಡ್, ಪಾನ್ ಕಾರ್ಡ್, ಹಣ ವರ್ಗಾವಣೆ ಸೇರಿದಂತೆ ಇನ್ನಿತರ ಸರ್ವಿಸ್‌ಗಳನ್ನು ನೀಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಬೆರಳಚ್ಚು ಹಾಗೂ ಆಧಾರ್ ಕಾರ್ಡ್ ನಂಬರ್ ಬಳಸಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಲ್ಲಿನ ಹಣ ಎಗರಿಸುವ ಬಗ್ಗೆ ಅರಿತುಕೊಂಡಿದ್ದರು.
ಬಿಹಾರದ ತಮ್ಮ ಸರ್ವಿಸ್ ಸೆಂಟರ್ನಲ್ಲಿ ಕುಳಿತುಕೊಂಡೇ ಸರ್ಕಾರಿ ಜಾಲತಾಣಗಳಿಗೆ ಗ್ರಾಹಕರ ಆಧಾರ್ ಕಾರ್ಡ್ ನಂಬರ್ ಹಾಗೂ ಬೆರಳಚ್ಚು ಸಿಗುವ ಮಾಹಿತಿ ಪರಿಶೀಲಿಸುತ್ತಿದ್ದರು. ಕರ್ನಾಟಕ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಜಾಲತಾಣದಲ್ಲಿ ಶೋಧಿಸಿದಾಗ ಸಾರ್ವಜನಿಕವಾಗಿ ಸಿಗುವಂತಹ ನೋಂದಣಿಗೆ ಸಂಬಂಧಿಸಿಂತೆ ಆಧಾರ್ ಕಾರ್ಡ್ ನಂಬರ್ ಹಾಗೂ ಬೆರಳಚ್ಚು ಸಂಗ್ರಹಿಸಿದ್ದಾರೆ. ಬೆರಳಚ್ಚುಗಳನ್ನು ಡೌನ್‌ಲೋಡ್ ಮಾಡಿ, ವಿವಿಧ ಸಾಫ್ಟ್‌ವೇರ್ ಮುಖಾಂತರ ಬೆರಳಚ್ಚು ಸ್ಪಷ್ಟವಾಗಿ ಕಾಣಿಸುವ ವ್ಯವಸ್ಥಿತವಾಗಿ ರೂಪಿಸಿಕೊಂಡು ಮೈಕ್ರೊ ಎಟಿಎಂಗಳ ಮುಖಾಂತರ ಬ್ಯಾಂಕ್ ಖಾತೆದಾರರ ಹಣ ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಗರ ಈಶಾನ್ಯ ವಿಭಾಗದ ಸೆನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ಕಾವೇರಿ ವೆಬ್ಸೈಟ್ ಬಳಸಿ ನೋಂದಣಿ ಪ್ರಮಾಣಪತ್ರ ಡೌನ್‌ಲೋಡ್ ಮಾಡಿಕೊಂಡು ಪ್ರತ್ಯೇಕ ಇಬ್ಬರು ವ್ಯಕ್ತಿಗಳ ಅಕೌಂಟ್ಗಳಲ್ಲಿ ಹಣ ಎಗರಿಸಿದ್ದರು. ಹಣ ಕಡಿತ ಮುನ್ನ ದೂರುದಾರರಿಗೆ ಒಟಿಪಿ ಸಂದೇಶ ಶೇರ್ ಮಾಡಿರಲಿಲ್ಲ. ಅಲ್ಲದೆ ಬ್ಯಾಂಕ್‌ನಿಂದಲೂ ಮಾಹಿತಿ ನೀಡಿರಲಿಲ್ಲ. ಅಪರಿಚಿತ ಲಿಂಕ್ ಕ್ಲಿಕ್ಗಳ ಮಾಡದಿದ್ದರೂ ಹಣ ಕಡಿತ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ್ ಹಾಗೂ ಪಿಎಸ್ಐ ರಮಣ್ ಗೌಡ ನೇತೃತ್ವದ ತಂಡ ತನಿಖೆ ಕೈಗೊಂಡಿತ್ತು.