ಬೆಂಗಳೂರು: ರಾಜಭವನದಲ್ಲಿ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುವುದಾಗಿ ಹೇಳಿ ವ್ಯಕ್ತಿಯನ್ನು ನಂಬಿಸಿ ಹಣ ಪಡೆದು ಮೋಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವಿಧಾನಸೌಧ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಗ್ಯಾನ್ ಪ್ರಕಾಶ್ (50), ಗಿರಿಧರ್ ಝಾ (37) ಬಂಧಿತರು.
ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುವುದಾಗಿ ತಿಳಿಸಿ, ಸಿನಿಮೀಯ ಶೈಲಿಯಲ್ಲಿ 1 ಲಕ್ಷ ರೂಪಾಯಿ ಪಡೆದು ಪೀಣ್ಯ ಕೈಗಾರಿಕಾ ಪ್ರದೇಶ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತ ಕೆ.ಆರ್.ವೆಂಕಟೇಶ್‌ಗೆ ಆರೋಪಿಗಳು ವಂಚಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಮೈಸೂರು: ಚೀಟಿ ವ್ಯವಹಾರದಲ್ಲಿ ವಂಚನೆ, ರಸ್ತೆಯಲ್ಲಿ ಕುಳಿತು ಗೋಳಾಡಿದ ಮಹಿಳೆ
ರಾಜ್ಯಪಾಲರ ಕಚೇರಿಯೊಳಗೆ ಹೋಗಿ ಹೊರಬಂದಿದ್ದ: ವೆಂಕಟೇಶ್ ಅವರನ್ನು ರಾಜಭವನಕ್ಕೆ ಕರೆದುಕೊಂಡು ಹೋಗಿ ತಾವು ರಾಜಭವನದ ಅಧಿಕಾರಿಗಳು ಎನ್ನುವಂತೆ ನಟಿಸಿದ್ದಾರೆ. ರಾಜ್ಯಪಾಲರ ಕಚೇರಿಯೊಳಗೆ ಹೋಗಿ ಅರ್ಧಗಂಟೆಗಳ ಕಾಲ ಮಾತನಾಡಿದ ಆರೋಪಿ ಹೊರಬಂದಿದ್ದ. ಐಜೆಸಿ ಎಂಬ ಸಂಸ್ಥೆಯ ವತಿಯಿಂದ ರಾಜಭವನದಲ್ಲಿ ಥಾವರ್ ಚಂದ್ ಗೆಹ್ಲೋಟ್ ಆಗಸ್ಟ್ 16 ರಂದು ಬೆಳಗ್ಗೆ 11 ಗಂಟೆಗೆ ಪ್ರಶಸ್ತಿ ನೀಡುತ್ತಾರೆ. ಈ ಪ್ರಶಸ್ತಿಯನ್ನು ಪಡೆಯಲು ನೀವು 1 ಲಕ್ಷ ರೂಪಾಯಿ ದೇಣಿಗೆ ಕೊಡಬೇಕಾಗುತ್ತದೆ ಎಂದು ವೆಂಕಟೇಶ್‌ಗೆ ಪರಿಚಿತರಾಗಿದ್ದ ಸುರೇಶ್ ಬಾಬು ದೂರವಾಣಿ ಮೂಲಕ ಸಂಪರ್ಕಿಸಿದ್ದ.