ಬೆಂಗಳೂರು: ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಸರ್ಕಾರಿ ಕಚೇರಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ.
ಈ ಸಭೆಯಲ್ಲಿ ಬಿಬಿಎಂಪಿಯ ಹಿರಿಯ ಅಧಿಕಾರಿಗಳು, ತಜ್ಞರು, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ನಾನಾ ವಿಭಾಗಗಳ ಮುಖ್ಯಸ್ಥರು, ರಾಜ್ಯ ಕೋವಿಡ್ ಸಲಹಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ಪಾಲ್ಗೊಂಡಿದ್ದರು.
ಏಕರೂಪದ ಚಿಕಿತ್ಸಾ ಪದ್ಧತಿ, ಟೆಸ್ಟ್, ಕೌನ್ಸೆಲಿಂಗ್, ನಿಗಾ, ಹಾಸಿಗೆ ಲಭ್ಯತೆ-ಹಂಚಿಕೆ, ಔಷಧ ದಾಸ್ತಾನು-ವಿತರಣೆ, ನಾನಾ ಆ್ಯಪ್‌ಗಳ ಬಳಕೆ, ಟೆಲಿ ಐಸಿಯು ಹಾಗೂ ಇತರೆ ವಿಷಯಗಳ ಜೊತೆ ಪ್ರಮುಖವಾಗಿ ನಾನಾ ಇಲಾಖೆ ಅಧಿಕಾರಿಗಳ ನಡುವೆ ಸಮನ್ವಯತೆ ಕಾಯ್ದುಕೊಂಡು ನಿರ್ದಿಷ್ಟ ಹೊಣೆಗಾರಿಕೆ ಹಂಚಿಕೆ ಕುರಿತಂತೆ ಸಭೆಯಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.
ಶಾಪಿಂಗ್ ಮಾಲ್, ಥಿಯೇಟರ್, ಹೋಟೆಲ್, ಮೆಟ್ರೋಗಳಲ್ಲೂ ಈ ಎರಡು ಡೋಸ್ ಕಡ್ಡಾಯ ನೀತಿ ಅಳವಡಿಸಲು ಸೂಚನೆ ನೀಡಲಾಗುವುದು. ಈ ಸಂಬಂಧ ಯೂನಿವರ್ಸಲ್ ಪಾಸ್ ಮಾಡಿಸಲು ಚಿಂತನೆ ಇದೆ. ಈ ಬಗ್ಗೆ ಐಟಿ ಕಂಪನಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ.