ಕರ್ನಾಟಕ

karnataka

By

Published : Feb 24, 2023, 3:03 PM IST

ETV Bharat / state

2 ವಿಚ್ಛೇದನ ಅರ್ಜಿ ಸಲ್ಲಿಸಿದ್ದ ಪತಿ: ಕೌಟುಂಬಿಕ ನ್ಯಾಯಾಲಯದ ವಿಚ್ಛೇದನ ರದ್ದುಪಡಿಸಿದ ಹೈಕೋರ್ಟ್‌

ರಾಯಚೂರು ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತ್ನಿ ದಿಂಪಿತಾ ಭೌಮಿಕ್​ ಹೈಕೋರ್ಟ್​ ಮೆಟ್ಟಿಲೇರಿದ್ದರು.

highcourt
ಹೈಕೋರ್ಟ್​

ಬೆಂಗಳೂರು: ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿ ಏಕಕಾಲದಲ್ಲಿ ಎರಡು ವಿಚ್ಛೇದನ ಪ್ರಕರಣಗಳನ್ನು ದಾಖಲಿಸಿ, ಏಕಪಕ್ಷೀಯವಾಗಿ (ಎಕ್ಸ್‌ಪಾರ್ಟೆ) ವಿಚ್ಛೇದನ ಮಂಜೂರು ಮಾಡಿದ್ದ ರಾಯಚೂರಿನ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ. ರಾಯಚೂರಿನ ಕೈಗಾರಿಕಾ ಅಭಿವೃದ್ಧಿ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ಪ. ಬಂಗಾಳದ ನಿವಾಸಿ ಅನಿರ್ಬನ್ ದಾಸ್ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಅಂಗೀಕರಿಸಿತ್ತು. ಈ ಆದೇಶ ರದ್ದುಪಡಿಸುವಂತೆ ಕೋರಿ ಪತ್ನಿ ದಿಂಪಿತಾ ಭೌಮಿಕ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶ್ ಕುಮಾರ್ ಮತ್ತು ನ್ಯಾ.ಟಿ.ಜಿ. ಶಿವಶಂಕರೇ ಗೌಡ ಅವರಿದ್ದ ನ್ಯಾಯಪೀಠ, ಎರಡೂ ರಾಜ್ಯಗಳಲ್ಲಿ ಕೌಟುಂಬಿಕ ನ್ಯಾಯಾಲಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಪ.ಬಂಗಾಳದಲ್ಲಿ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ರಾಯಚೂರಿನಲ್ಲಿಯೂ ಅರ್ಜಿ ಸಲ್ಲಿಸಿದ್ದಾರೆ. ಈ ನಡುವೆ ಪ.ಬಂಗಾಳದಲ್ಲಿ ನ್ಯಾಯಾಲಯ ಅರ್ಜಿ ರದ್ದು ಪಡಿಸಿದೆ. ಆದರೆ, ರಾಯಚೂರು ನ್ಯಾಯಾಲಯ ಅರ್ಜಿ ಪುರಸ್ಕರಿಸಿ ವಿಚ್ಛೇದನ ಮಂಜೂರು ಮಾಡಿದೆ. ಒಂದು ಪ್ರಕರಣ ಮುಂದುವರೆಸದಿದ್ದರೂ ಮತ್ತೊಂದು ಪ್ರಕರಣದಲ್ಲಿ ಏಕಪಕ್ಷೀಯವಾಗಿ ಆದೇಶ ಪಡೆದುಕೊಂಡಿದ್ದಾರೆ. ಹೀಗಾಗಿ ಪತಿ ಪಡೆದುಕೊಂಡಿರುವ ವಿಚ್ಛೇದನ ರದ್ದುಪಡಿಸುತ್ತಿರುವುದಾಗಿ ತಿಳಿಸಿದೆ.

ಅಲ್ಲದೇ, ರಾಯಚೂರು ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶವನ್ನು ಅಂಗೀಕರಿಸಿದಲ್ಲಿ ಅರ್ಜಿದಾರರಾದ ದಿಂಪಿತಾ ಭೌಮಿಕ್ ಅವರ ವಿರುದ್ಧ ಪೂರ್ವಾಗ್ರಹವಾಗಿ ತೀರ್ಪು ನೀಡಿದಂತಾಗಲಿದೆ. ಹೀಗಾಗಿ ಅರ್ಜಿಯನ್ನು ಪುರಸ್ಕರಿಸಲಾಗುತ್ತಿದೆ. ಜತೆಗೆ, ರಾಯಚೂರು ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಛೇದನವನ್ನು ರದ್ದುಪಡಿಸಿ ಆದೇಶಿಸಿದ್ದು, ಪ್ರಕರಣವನ್ನು ಕಾನೂನು ಪ್ರಕಾರ ನಿರ್ಧರಿಸಲು ಸೂಚನೆ ನೀಡಿ ರಾಯಚೂರು ಕೌಟುಂಬಿಕ ನ್ಯಾಯಾಲಯಕ್ಕೆ ಹಿಂದಿರುಗಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ:ಅನಿರ್ಬನ್ ದಾಸ್ ಮತ್ತು ದಿಂಪಿತಾ ಭೌಮಿಕ್ ಅವರು 2019ರ ಜನವರಿಯಲ್ಲಿ ವಿವಾಹವಾಗಿದ್ದು, ಬಳಿಕ 2020ರ ಜನವರಿಯಲ್ಲಿ ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ವಿಚ್ಛೇದನ ಕೋರಿ ಪ.ಬಂಗಾಳದ ಉತ್ತರ ಪರಗಣದ ಜಿಲ್ಲಾ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಪಶ್ಚಿಮ ಬಂಗಾಳದ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿರುವಾಗಲೇ ರಾಯಚೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯಿದೆಯಡಿಯಲ್ಲಿ ವಿಚ್ಛೇದನ ಕೋರಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗೆ ಸಂಬಂಧಿಸಿದಂತೆ ರಾಯಚೂರು ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ದಿಂಪಿತಾ ಭೌಮಿಕ್ ಅವರಿಗೆ ತಲುಪಿರಲಿಲ್ಲ. ಹೀಗಾಗಿ ಆಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಯಚೂರಿನ ಕೌಟುಂಬಿಕ ನ್ಯಾಯಾಲಯ ಏಕಪಕ್ಷೀಯವಾಗಿ 2022ರ ಏಪ್ರಿಲ್ 18 ರಂದು ಅನಿರ್ಬನ್ ದಾಸ್ ಅವರೊಂದಿಗೆ ವಿವಾಹ ವಿಚ್ಛೇದನ ಮಂಜೂರು ಮಾಡಿ ಆದೇಶಿಸಿತ್ತು. ಆದರೆ, ಪಶ್ಚಿಮ ಬಂಗಾಳದ ಕೌಟುಂಬಿಕ ನ್ಯಾಯಾಲಯ 2022ರ ಜೂನ್ 2 ರಂದು ಅರ್ಜಿ ವಜಾಗೊಳಿಸಿತ್ತು. ರಾಯಚೂರು ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ದಿಂಪಿತಾ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಅನಿರ್ಬನ್ ದಾಸ್ ಅವರು ಪಶ್ಚಿಮ ಬಂಗಾಳದ ಕೌಟುಂಬಿಕ ನ್ಯಾಯಾಲಯಲ್ಲಿ ವಿವಾಹ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಅಂಶವನ್ನು ಮರೆಮಾಚಿ ರಾಯಚೂರಿನಲ್ಲಿ ದಾವೆ ಹೂಡಿದ್ದಾರೆ. ನ್ಯಾಯಾಲಯದ ಸಮನ್ಸ್ ಈವರೆಗೂ ಜಾರಿಯಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅಲ್ಲದೆ, ಪಶ್ಚಿಮ ಬಂಗಾಳದಲ್ಲಿ ಸಲ್ಲಿಸಿದ್ದ ಅರ್ಜಿಯ ಮನವಿಗಳು ಮತ್ತು ರಾಯಚೂರಿನಲ್ಲಿ ಸಲ್ಲಿಸಿದ್ದ ಅರ್ಜಿಯ ಮನವಿಗಳು ಸಂಪೂರ್ಣ ವಿಭಿನ್ನವಾಗಿದೆ. ಹೀಗಾಗಿ ರಾಯಚೂರು ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಪಡಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ:ಲೋಕ ಅದಾಲತ್‌ನಲ್ಲಿ ಭಾಗವಹಿಸದಂತೆ ತಡೆದ ಮಂಡ್ಯ ವಕೀಲರ ಸಂಘದ ನಡೆಗೆ ಹೈಕೋರ್ಟ್ ಅಸಮಧಾನ

ABOUT THE AUTHOR

...view details