ಬೆಂಗಳೂರು:ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಯುವಕರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಆರ್.ಎಮ್.ಸಿ.ಯಾರ್ಡ್ ಬಳಿ ನಡೆದಿದೆ. ಮನಮೋಹನ್ (31) ಹಾಗೂ ನಿಖಿಲ್ (25) ಮೃತರು. ಇಂದು ಮುಂಜಾನೆ 3:30ರ ಸಮಯದಲ್ಲಿ ಬಿಎಂಡಬ್ಲೂ (BMW) ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ ಅವಘಡ ಸಂಭವಿಸಿದೆ.
ಇಬ್ಬರು ಯುವಕರು ಸ್ನೇಹಿತರೊಂದಿಗೆ ಸಂತೋಷಕೂಟ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದರು. ಈ ಸಂದರ್ಭದಲ್ಲಿ ಮಾರ್ಗಮಧ್ಯೆ ಕಳೆದುಕೊಂಡ ಬೈಕ್ ಕಂಬಕ್ಕೆ ಡಿಕ್ಕಿಯಾಗಿದೆ. ಇಬ್ಬರು ಬೈಕ್‌ನಿಂದ ಹಾರಿ ಕೆಲವು ಮೀಟರ್‌ಗಳಷ್ಟು ದೂರ ಬಿದ್ದಿದ್ದಾರೆ. ಪರಿಣಾಮ, ತೀವ್ರ ರಕ್ತಸ್ರಾವ ಉಂಟಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮದ್ಯಪಾನ ಮಾಡಿರುವುದು, ಹೆಲ್ಮೆಟ್ ಧರಿಸದೇ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿರುವುದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಡರ್ಗೆ ಡಿಕ್ಕಿ ಹೊಡೆದ ಕಾರು(ಪ್ರತ್ಯೇಕ ಘಟನೆ):ನೆಲಮಂಗಲದ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸ್ವಿಫ್ಟ್ ಕಾರೊಂದು ಡಿವೈಡರ್ಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ನಡೆದಿತ್ತು. ಕಾರ್‌ನಲ್ಲಿದ್ದ ಐವರ ಪೈಕಿ ಮೂವರು ದುರ್ಮರಣ ಹೊಂದಿದರೆ, ಇನ್ನಿಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ನಿಂತಿದ್ದ ಬೈಕ್ಗೆ ಬಸ್ ಡಿಕ್ಕಿ: ಮಂಗಳೂರಿನಲ್ಲಿ ರಸ್ತೆ ದಾಟಲೆಂದು ನಿಂತಿದ್ದ ಬೈಕ್ಗೆ ವಿರುದ್ಧ ದಿಕ್ಕಿನಲ್ಲಿ ಬಂದ ಖಾಸಗಿ ಬಸ್ ಡಿಕ್ಕಿಯಾಗಿ ಇಬ್ಬರು ಗಾಯಗೊಂಡ ಘಟನೆ ನಡೆದಿತ್ತು. ಕಳೆದ ಭಾನುವಾರ ನಗರದ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ನ ಹೊಸಬೆಟ್ಟು ಸಮೀಪ ಅಪಘಾತ ಸಂಭವಿಸಿದೆ. ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಖಾಸಗಿ ಎಕ್ಸ್‌ಪ್ರೆಸ್ ಬಸ್ ವೇಗವಾಗಿ ಬಂದು ಬೈಕ್ಗೆ ಡಿಕ್ಕಿಯಾಗಿದೆ. ಗಾಯಗೊಂಡಿದ್ದ ಬೈಕ್ ಸವಾರರಾದ ಅಬ್ದುಲ್ ಖಾದರ್ ಅರ್ಫಾನ್ ಮತ್ತು ಅಮೀರ್ ಸಾಹಿಲ್ ಎಂಬವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಸ್ ಚಾಲಕ ಡೆಲ್ಸನ್ ಕ್ಯಾಸ್ಟಲಿನೋ ಎಂಬಾತನ ವಿರುದ್ಧ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಪರಿಚಿತ ವಾಹನ ಡಿಕ್ಕಿ:ಬೈಕ್ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಕಾನ್ಸ್ಟೇಬಲ್ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಕಳೆದ ಎರಡು ದಿನಗಳ ಹಿಂದೆ ದಾರವಾಡದಲ್ಲಿ ನಡೆದಿತ್ತು. ಹುಚ್ಚೇಶ ಹಿರೇಗೌಡರ (37) ಮೃತರು. ಬೈಕ್ ಹಿಂಬದಿ ಕುಳಿತಿದ್ದ ಮಹಿಳಾ ಕಾನ್ಸ್ಟೇಬಲ್ ಲಕ್ಷ್ಮೀ ಗಂಭೀರವಾಗಿ ಗಾಯಗೊಂಡಿದ್ದರು. ಗಣೇಶೋತ್ಸವ ಬಂದೋಬಸ್ತ್ ಕರ್ತವ್ಯ ಮುಗಿಸಿಕೊಂಡು ಇಬ್ಬರು ಪೊಲೀಸ್ ಸಿಬ್ಬಂದಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಜರುಗಿದೆ.
ಇದನ್ನೂ ಓದಿ:ಧಾರವಾಡದಲ್ಲಿ ಅಪರಿಚಿತ ವಾಹನ ಡಿಕ್ಕಿ: ಕಾನ್ಸ್ಟೇಬಲ್ ಸಾವು, ಮಹಿಳಾ ಸಿಬ್ಬಂದಿಗೆ ಗಂಭೀರ ಗಾಯ