ಬೆಂಗಳೂರು :ನಾಲ್ಕು ಅಂತಸ್ತಿನ ಕಟ್ಟಡದ ಮೇಲಿದ್ದ ನೀರಿನ ಟ್ಯಾಂಕ್ ಕುಸಿದು ಬಿದ್ದು ಗ್ರಾಹಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ರಾಜಧಾನಿಯ ಶಿವಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಬುಧವಾರ ರಾತ್ರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ ಇಂದು ಮತ್ತೊಬ್ಬರು ಮೃತಪಟ್ಟಿದ್ದಾರೆ. ಅರುಳ್, ನಾಗೇಶ್ವರ ರಾವ್ ಮತ್ತು ಕಮಲ್ ಥಪಾ ಮೃತ ದುರ್ದೈವಿಗಳು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಾಲ್ಕು ಅಂತಸ್ತಿನ ಕಟ್ಟಡದ ಮೇಲೆ ವಾಟರ್ ಟ್ಯಾಂಕ್ (ಸಿಂಟ್ಯಾಕ್ಸ್) ಇತ್ತು. ಅದೇ ಕಟ್ಟಡದ ಕೆಳಗಡೆ ತಳ್ಳುವ ಗಾಡಿಯಲ್ಲಿ ಫಾಸ್ಟ್ ಫುಡ್ ಅಂಗಡಿ ಇತ್ತು. ನೀರು ತುಂಬಿದ್ದ ಟ್ಯಾಂಕಿನಿಂದ ಕಟ್ಟಡದ ಗೋಡೆ ದುರ್ಬಲಗೊಂಡಿದೆ. ಆದ್ದರಿಂದ ಟ್ಯಾಂಕ್ ಜೊತೆಗೆ ಗೋಡೆಯೂ ನೆಲಕ್ಕೆ ಕುಸಿದು ಬಿದ್ದಿವೆ. ಪರಿಣಾಮ ಒಬ್ಬ ಗ್ರಾಹಕ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಶಿವಾಜಿನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.