ಬೆಂಗಳೂರು: ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ನಡೆಸಿರುವ ಆರೋಪದಡಿ ಬೊಮ್ಮನಹಳ್ಳಿ ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಆಪ್ತ ಸಹಾಯಕ ನೀಡಿದ ದೂರಿನನ್ವಯ ಎನ್.ಸಿ.ಆರ್ ದಾಖಲಿಸಿದ್ದ ಪೊಲೀಸರು, ಬಳಿಕ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿ, ಇಬ್ಬರನ್ನು ಬಂಧಿಸಿದ್ದಾರೆ.
ರೆಡ್ಡಿ ಆಪ್ತ ಸಹಾಯಕ ದೂರಿನಲ್ಲಿ ಹೇಳಿದ್ದೇನು?: ''ಕಳೆದ ಹದಿನೈದು ದಿನದಿಂದ ಶಾಸಕರ ಮನೆಯ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಫೆಬ್ರವರಿ 3ರಂದು ಬೊಮ್ಮನಹಳ್ಳಿಯ ಚಂದ್ರು ಎಂಬಾತ ತಮಗೆ ಕರೆ ಮಾಡಿದ್ದ. ಶಾಸಕರ ಹತ್ಯೆಗೆ ಸಂಚು ನಡೆದಿದೆ, ಚಿತ್ರದುರ್ಗದ ಹೊಳಲ್ಕೆರೆಯ ಆಕಾಶ್ ಎಂಬಾತ ತನಗೆ ತಿಳಿಸಿದ್ದಾನೆ ಎಂದು ಚಂದ್ರು ಹೇಳಿದ್ದಾನೆ. ಅಲ್ಲದೆ, ಶಾಸಕರ ಹತ್ಯೆಗೆ 2 ಕೋಟಿ ಸುಪಾರಿ ಪಡೆಯಲಾಗಿದೆ ಎಂದೂ ಸಹ ಚಂದ್ರು ಹೇಳಿದ್ದ. ಜೊತೆಗೆ ಸುಪಾರಿ ಪಡೆದವನ ಫೋಟೋವನ್ನೂ ಸಹ ಚಂದ್ರು ಕಳಿಸಿದ್ದ. ನಂತರ ಆ ಫೋಟೊ ಪರಿಶೀಲಿಸಿದಾಗ ಅದರಲ್ಲಿರುವುದು ಬೆಂಗಳೂರಿನ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಎಂಬುದು ಗೊತ್ತಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು'' ಎಂದು ಸತೀಶ್ ರೆಡ್ಡಿಯ ಆಪ್ತ ಸಹಾಯಕ ಹರೀಶ್ ಬಾಬು ದೂರು ನೀಡಿದ್ದಾರೆ. ದೂರಿನ ಅನ್ವಯ ಕಾರ್ಯ ಪ್ರವೃತ್ತರಾದ ಬೊಮ್ಮನಹಳ್ಳಿ ಠಾಣೆ ಪೊಲೀಸರು ಅಪ್ರಾಪ್ತ ಸೇರಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯೆ :ಪ್ರಕರಣದ ಬಗ್ಗೆ ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿ, ಸುಪಾರಿ ಹಿಂದೆ ರಾಜಕೀಯ ದುರುದ್ದೇಶವೇ ಇದೆ. ನಾನು ಯಾರಿಗೂ ದ್ರೋಹ ಮಾಡಿಲ್ಲ. ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ, ಸುಪಾರಿ ಬಗ್ಗೆ ಮಾತಾಡಿರುವವರ ಆಡಿಯೋ ಪೊಲೀಸರಿಗೆ ಸಿಕ್ಕಿದೆ. ಅಲ್ಲದೇ, ನಾನು ಯಾರ ಮೇಲೆಯೂ ಆರೋಪ ಮಾಡುವುದಿಲ್ಲ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ಆದರೆ, ಪಾರದರ್ಶಕ ತನಿಖೆ ಆಗಲಿ ಎಂದು ಆಗ್ರಹಿಸಿದರು.
''ನನಗೆ ನಿನ್ನೆ ಸಂಜೆ ಪೊಲೀಸರು ತಿಳಿಸಿದರು. ಈಗ ಚುನಾವಣೆ ಇದೆ, ರಾಜಕೀಯ ಕಾರಣಗಳೂ ಇರಬಹುದು. ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಆಗ ಸಿಎಂ ಭದ್ರತೆ ತೆಗೆದುಕೊಳ್ಳುವಂತ ಹೇಳಿದರು. ಆದರೆ, ನನಗೆ ಭದ್ರತೆ ಬೇಡ ಅಂದಿದ್ದೇನೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ'' ಎಂದರು.