ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರ ಜೊತೆ ಪ್ರತ್ಯೇಕವಾಗಿ ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ದಿನ ಚಿಂತನಾ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ಎರಡು ದಿನ ಚಿಂತನಾ ಸಭೆ: ಸಚಿವ ಕೆ.ಎಸ್.ಈಶ್ವರಪ್ಪ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸೆ. 8ರಂದು ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಪಿಡಿಒ ಅಧಿಕಾರಿಗಳ ಜೊತೆ ಒಂದು ದಿನ ಪೂರ್ತಿ ಸಭೆ ನಡೆಸಲಿದ್ದು, ಸೆ. 9ರಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿಯ ಅಧ್ಯಕ್ಷರ ಜೊತೆ ಕೂಡ ಒಂದು ದಿನದ ಸಭೆ ನಡೆಸಲಿದ್ದೇನೆ. ಈ ವೇಳೆ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಒತ್ತು ಕೊಡಲು ಈ ಸಭೆಯನ್ನು ಸುವರ್ಣಸೌಧದಲ್ಲಿ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ, ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ದೋಷ, ಇನ್ನು ಕೆಲವೆಡೆ ನೀರಿನ ಘಟಕ ನಿರ್ಮಿಸಬೇಕಾಗಿದೆ. ಈ ಕುರಿತು ಚರ್ಚೆ ಮಾಡಲಿದ್ದೇವೆ. ತುರ್ತು ರಸ್ತೆ ಸಂಪರ್ಕಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದು, ಸಕಾಲದಲ್ಲಿ ಉದ್ಯೋಗ ಹಾಗೂ ಕೂಲಿ ಪಾವತಿ ಬಗ್ಗೆನೂ ಗಮನಹರಿಸಿ ಕ್ರಮ ಕೈಗೊಳ್ಳಲಿದ್ದೇವೆ. ಅಂತರ್ಜಲ ರಕ್ಷಣಾ ಕಾಮಗಾರಿ, 20 ಸಾವಿರ ಕೆರೆಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಶೌಚಾಲಯದ ನಿರ್ಮಾಣ, ಅದರ ನಿರ್ವಹಣೆ ಬಗ್ಗೆನೂ ಆದ್ಯತೆ ನೀಡಲಿದ್ದು, ಸ್ವಚ್ಛತೆ ಹಾಗೂ ಕಸ ವಿಲೇವಾರಿ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಅಷ್ಟೇ ಅಲ್ಲದೆ, ಪಂಚಾಯತ್ ರಾಜ್ ಸಂಸ್ಥೆಗಳ ಸಬಲೀಕರಣಕ್ಕೆ ಚಿಂತನೆ ನಡೆಸುತ್ತಿದ್ದೇವೆ. ಸ್ವಚ್ಛ ಭಾರತ್ ಯೋಜನೆಗೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಈ ಎರಡು ದಿನಗಳ ಚಿಂತನಾ ಸಭೆಗೆ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳೂ ಕೂಡ ಬಂದು ತಮ್ಮ ಸಮಸ್ಯೆ, ವಿವಿಧ ಯೋಜನೆಗಳ ಬಗ್ಗೆ ಚರ್ಚಿಸುವಂತೆ ಮನವಿ ಮಾಡಲಿದ್ದೇವೆ. ಎಲ್ಲ ಜನಪ್ರತಿನಿಧಿಗಳು ಇದರಲ್ಲಿ ತೊಡಗಿಸಿಕೊಂಡು ಗ್ರಾಮೀಣಾಭಿವೃದ್ಧಿಗಾಗಿ ಒತ್ತು ನೀಡಲಿದ್ದೇನೆ ಎಂದು ವಿವರಿಸಿದರು.
ಇನ್ನು ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಷ್ಟದ ಸಮೀಕ್ಷೆ ಮಾಡಲು ಸೂಚನೆ ನೀಡಿದ್ದೇನೆ. ಇಲಾಖೆ ಮೂಲಕ ಆಗಬೇಕಾದ ಎಲ್ಲ ಪರಿಹಾರ ಕ್ರಮ ಜರುಗಿಸಲಾಗುತ್ತದೆ. ಉತ್ತರ ಕರ್ನಾಟಕದಲ್ಲಿನ ಹಾನಿಯ ಬಗ್ಗೆ ವರ್ಣನೆ ಮಾಡಲು ಅಸಾಧ್ಯ. ಅಲ್ಲಿನ ಪರಿಸ್ಥಿತಿ ನೋಡಿ ನನಗೆ ಕಣ್ಣೀರು ಬಂತು. ನೆರೆ ಪೀಡಿತ ಪ್ರದೇಶಗಳಲ್ಲಿ ಈ ಬಾರಿ ಅಧಿಕಾರಿಗಳು ಸಾಕಷ್ಟು ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಅಲ್ಲಿ ತಾತ್ಕಾಲಿಕ ಹಾಗೂ ಶಾಶ್ವತ ಪರಿಹಾರ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಸಂತ್ರಸ್ತರಿಗೆ ಎತ್ತರ ಪ್ರದೇಶದಲ್ಲಿ ಮನೆ ಕಟ್ಟಲು ಸೂಚನೆ ನೀಡಲಾಗಿದೆ ಎಂದು ವಿವರಿಸಿದರು.