ಬೆಂಗಳೂರು: ಇದೇ ಮೊದಲ ಬಾರಿಗೆ ರಾಜಧಾನಿಯ ಅರಮನೆ ಮೈದಾನದಲ್ಲಿ ’’ಬೆಂಗಳೂರು ಕಂಬಳ - ನಮ್ಮ ಕಂಬಳ’’ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನವೆಂಬರ್ 25 ಹಾಗೂ 26 ರಂದು ಕಂಬಳ ಉತ್ಸವ ನಡೆಯಲಿದ್ದು ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ.
ನಾಳೆ ಬೆಳಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬಳ ಉದ್ಘಾಟಿಸಲಿದ್ದು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಹಾಗೂ ಚಲನಚಿತ್ರ ನಟರು, ರಾಜಕೀಯ ಮುಖಂಡರು ಪಾಲ್ಗೊಳ್ಳಲಿದ್ದಾರೆ.
ಸಕಲ ವ್ಯವಸ್ಥೆ:ಕಂಬಳದ ಕೋಣಗಳ ಓಟಕ್ಕೆ ಇದೇ ಮೊದಲ ಬಾರಿಗೆ 155 ಮೀಟರ್ ಅಗಲದ ಕರೆ ನಿರ್ಮಾಣವಾಗಿದ್ದು, ಈ ಜೋಡಿ ಕರೆಗೆ ರಾಜ, ಮಹಾರಾಜ ಎಂದು ಹೆಸರಿಡಲಾಗಿದೆ. ಉಚಿತ ಪ್ರವೇಶ ನೀಡಿರುವುದರಿಂದ ವೀಕ್ಷಣೆಗೆ ಸುಮಾರು 8ರಿಂದ 10 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ರಾಜ್ಯ ರಸ್ತೆ ಸಾರಿಗೆಯಿಂದ 150 ಹೆಚ್ಚುವರಿ ಬಸ್ ವ್ಯವಸ್ಥೆ ಕೂಡ ಮಾಡಲಾಗಿದೆ. ಮೈದಾನಕ್ಕೆ ಕೊರಿಯನ್ ಟೆಂಟ್ ಹಾಕಲಾಗಿದೆ. 150 ಸ್ಟಾಲ್‌ಗಳು ಇರಲಿದ್ದು, ಕ್ಯಾಂಟೀನ್ ಸೇರಿದಂತೆ ಇತರ ಸೌಲಭ್ಯ ಇರಲಿದೆ. ಕರಾವಳಿಯ ವಿವಿಧ ಬಗೆಯ ಖಾದ್ಯಗಳ ಉಣಬಡಿಸಲು ಸಿದ್ಧತೆ ನಡೆದಿದೆ. ಬೆಂಗಳೂರಿನಲ್ಲಿರುವ ಕರಾವಳಿ ಮೂಲದ ಸುಮಾರು 65 ಸಂಘಟನೆಗಳು ಸ್ಪರ್ಧೆಗೆ ಸಹಕಾರ ನೀಡಿವೆ. ಯುವಕರು ಹಾಗೂ ಎಲ್ಲ ಜನತೆಗೆ ಕಂಬಳ ಪರಿಚಯಿಸುವುದು ಇದರ ಉದ್ದೇಶವಾಗಿದೆ.
ಮೊದಲ ಬಾರಿಗೆ ಮೂರನೇ ಬಹುಮಾನ:ಕಂಬಳದ ಇತಿಹಾಸದಲ್ಲಿ ಮೊದಲ ಸಲ ತೃತೀಯ ಬಹುಮಾನ ಕೂಡ ಇರಲಿದೆ. ಮೂರನೇ ಸ್ಥಾನ ಪಡೆದು ಗೆಲ್ಲುವ ಕೋಣಕ್ಕೆ ಕೂಡ 4 ಗ್ರಾಂ ಚಿನ್ನ 25 ಸಾವಿರ ಬಹುಮಾನ ಇರಲಿದೆ. ಕಂಬಳದಲ್ಲಿ ಗೆದ್ದ ಜೋಡಿಗೆ 16 ಗ್ರಾಂ ಚಿನ್ನದ ಪದಕ ಹಾಗೂ ಒಂದು ಲಕ್ಷ ನಗದು ನೀಡಲಾಗುತ್ತದೆ. ಎರಡನೇ ಸ್ಥಾನ ಪಡೆದವರಿಗೆ 8 ಗ್ರಾಂ ಚಿನ್ನದ ಪದಕ ಹಾಗೂ 50 ಸಾವಿರ ನಗದು ನೀಡಲಾಗುತ್ತಿದೆ.
ನಗರದಲ್ಲಿ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಪರ್ಯಾಯ ರಸ್ತೆ ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಸ್ಪರ್ಧೆ ನೋಡಲು ಬರುವ ಜನರಿಗೆ ವಾಹನ ನಿಲುಗಡೆ ಮಾಡಲು ಪ್ರತ್ಯೇಕ ಸ್ಥಳಾವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ಸಂಚರಿಸುವ ಮಾರ್ಗದಲ್ಲಿಯೂ ಭಾರಿ ಬದಲಾವಣೆ ಮಾಡಲಾಗಿದೆ.
ಎಲ್ಲಲ್ಲಿ ವಾಹನಗಳ ನಿಲುಗಡೆ:ನಗರದ ಸಿಬಿಡಿ ಏರಿಯಾದಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಮೇಖ್ರಿ ಸರ್ಕಲ್ ಬಳಿ ಯೂ ಟರ್ನ್ ಪಡೆದು ಮೇದ್ರಿ ಸರ್ಕಲ್ ಗೇಟ್ ನಂ-01 (ಕೃಷ್ಣವಿಹಾರ್) ರಲ್ಲಿ ಪ್ರವೇಶಿಸಿ, ವಾಹನಗಳನ್ನು ಪಾರ್ಕ್ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ನಡೆದುಕೊಂಡು ಹೋಗಿ ತಲುಪಬಹುದು.
ಬಳ್ಳಾರಿ ರಸ್ತೆ ಹೆಬ್ಬಾಳ ಕಡೆಯಿಂದ ಬರುವ ವಾಹನಗಳು ಮೇಖ್ರಿ ಸರ್ಕಲ್ ಅಂಡರ್ ಪಾಸ್ನಲ್ಲಿ ಬಂದು ಗೇಟ್ ನಂ - 01 ಕೃಷ್ಣವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ನಡೆದು ತಲುಪುವುದು. ಅದೇ ರೀತಿ ಯಶವಂತಪುರ ಕಡೆಯಿಂದ ಬರುವ ವಾಹನಗಳು ಜಂಕ್ಷನ್-ಮೇಕ್ರಿ ಸರ್ಕಲ್ ಬಲ ತಿರುವು ಪಡೆದು ಗೇಟ್ ನಂ-01 ಕೃಷ್ಣ ವಿಹಾರ್ ಅರಮನೆ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ನಂತರ ಕಾರ್ಯಕ್ರಮದ ಸ್ಥಳಕ್ಕೆ ನಡೆದು ತಲುಪಬಹುದು.
ಕ್ಯಾಬ್ ಸೇವೆ ಬಳಸಿಕೊಳ್ಳುವವರು ಗೇಟ್ ನಂ-02 ರಲ್ಲಿ ಪ್ರವೇಶಿಸಿ ನಿಗದಿತ ಸ್ಥಳದಲ್ಲಿ ಇಳಿದು ಗೇಟ್ ನಂ-03 ಮುಖಾಂತರ ಕ್ಯಾಬ್ ಗಳು ನಿರ್ಗಮಿಸಬಹುದಾಗಿದೆ. ಹಿಂತಿರುಗಿ ವಾಪಸ್ ಹೋಗುವಾಗ ಎಲ್ಲ ವಾಹನಗಳು ಕಡ್ಡಾಯವಾಗಿ ಜಯಮಹಲ್ ರಸ್ತೆಯ ಅಮಾನುಲ್ಲಾ ಖಾನ್ ಗೇಟ್ ಮುಖಾಂತರ ನಿರ್ಗಮಿಸಬೇಕು. ಕಾರ್ಯಕ್ರಮ ಹೊರತುಪಡಿಸಿ, ಇತರ ಸ್ಥಳಗಳಿಗೆ ಹೋಗುವ ರಸ್ತೆ ಬಳಕೆದಾರರು ಈ ಕೆಳಕಂಡ ರಸ್ತೆಗಳನ್ನು ಬಳಸದೇ ಬದಲಿ ಮಾರ್ಗದಲ್ಲಿ ಸಂಚರಿಸಲು ಟ್ರಾಫಿಕ್ ಪೊಲೀಸರು ಮನವಿ ಮಾಡಿದ್ದಾರೆ.
- ಅರಮನೆ ರಸ್ತೆ: ಮೈಸೂರು ಬ್ಯಾಂಕ್ ಸರ್ಕಲ್ನಿಂದ ವಸಂತನಗರ ಅಂಡರ್ ಪಾಸ್ ವರೆಗೆ
- ಎಂ.ವಿ ಜಯರಾಮ ರಸ್ತೆ:ಅರಮನೆ ರಸ್ತೆ, ಬಿ.ಡಿ.ಎ. ಜಂಕ್ಷನ್ನಿಂದ ಚಕ್ರವರ್ತಿ ಲೇಔಟ್ ಸೇರಿದಂತೆ ವಸಂತನಗರ ಅಂಡರ್‌ಪಾಸ್ ನಿಂದ ಹಳೆ ಉದಯ ಟಿವಿ ಜಂಕ್ಷನ್ ವರೆಗೆ (ಎರಡು ದಿಕ್ಕಿನಲ್ಲಿ)
- ಬಳ್ಳಾರಿ ರಸ್ತೆ: ಮೇಖ ವೃತ್ತ ದಿಂದ ಎಲ್.ಆರ್.ಡಿ.ಇ ಜಂಕ್ಷನ್ ವರೆಗೆ
- ಕನ್ನಿಂಗ್ ಹ್ಯಾಂ ರಸ್ತೆ:ಬಾಳೇಕುಂದ್ರಿ ಸರ್ಕಲ್ ನಿಂದ ಲೀ-ಮೆರಿಡಿಯನ್ ಅಂಡರ್ ಪಾಸ್ ವರೆಗೆ
- ಮಿಲ್ಲರ್ಸ್ ರಸ್ತೆ:ಹಳೆ ಉದಯ ಟಿ.ವಿ ಜಂಕ್ಷನ್ ನಿಂದ ಎಲ್.ಆರ್.ಡಿ.ಇ ಜಂಕ್ಷನ್ ವರೆಗೆ
- ಜಯಮಹಲ್ ರಸ್ತೆ: ಜಯಮಹಲ್ ರಸ್ತೆ ಹಾಗೂ ಬೆಂಗಳೂರು ಅರಮನೆ ಸುತ್ತಮುತ್ತಲಿನ ರಸ್ತೆ ಹೊರತುಪಡಿಸಿ ಪರ್ಯಾಯ ರಸ್ತೆಗಳನ್ನ ಬಳಸುವಂತೆ ಕೋರಿದ್ದಾರೆ.
ಈ ರಸ್ತೆಗಳಲ್ಲಿ ವಾಹನಗಳ ನಿಲುಗಡೆಗೆ ನಿರ್ಬಂಧ: ಪ್ಯಾಲೇಸ್ ರಸ್ತೆ, ವಸಂತನಗರ ರಸ್ತೆ, ಎಂ.ವಿ ಜಯರಾಮ್ ರಸ್ತೆ,ಸಿ.ವಿ.ರಾಮನ್ ರಸ್ತೆ, ರಮಣ ಮಹರ್ಷಿ ರಸ್ತೆ, ನಂದಿದುರ್ಗ ರಸ್ತೆ, ಜಯಮಹಲ್ ರಸ್ತೆ ಬಳ್ಳಾರಿ ರಸ್ತೆ, ಮೌಂಟ್ ಕಾರ್ಮಲ್ ಕಾಲೇಜು ರಸ್ತೆ, ತರಳಬಾಳು ರಸ್ತೆಗಳಲ್ಲಿ ವಾಹನಗಳ ನಿಲುಗಡೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ.
ಕಂಬಳ ಉತ್ಸವದ ಹಿನ್ನೆಲೆ ಸರಕು ಸಾಗಣೆ ವಾಹನಗಳ ಸಂಚಾರವನ್ನು 21ರಿಂದ 22ರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಹಾಗೂ ಮಧ್ಯಾಹ್ನ 3ರಿಂದ ರಾತ್ರಿ 10 ಗಂಟೆಯವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅರಮನೆ ಮೈದಾನದಲ್ಲಿ ಕಂಬಳ ಉತ್ಸವ ನಡೆಯುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆಯಿದೆ. ಸಂಚಾರ ದಟ್ಟಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸೂಕ್ತ ಟ್ರಾಫಿಕ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಮಾಹಿತಿ ನೀಡಿದ್ದಾರೆ.
ಇದನ್ನೂಓದಿ:ಡಿಕೆಶಿ ಪ್ರಕರಣ: ಹಿಂದಿನ ಸರ್ಕಾರ ಕಾನೂನುಬದ್ಧ ಕ್ರಮ ಅನುಸರಿಸಿಲ್ಲ- ಸಿಎಂ ಸಿದ್ದರಾಮಯ್ಯ