ದಂಪತಿಯಿಂದ ಸುಲಿಗೆ ಆರೋಪ: ಸಂಪಿಗೆಹಳ್ಳಿ ಠಾಣೆಯ ಇಬ್ಬರು ಸಿಬ್ಬಂದಿ ವಜಾ ಬೆಂಗಳೂರು: ದಂಪತಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪ ಎದುರಿಸುತ್ತಿರುವ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ರಾಜೇಶ್ ಹಾಗೂ ಕಾನ್ಸ್ಟೇಬಲ್ ನಾಗೇಶ್ ಸೇವೆಯಿಂದ ವಜಾಗೊಂಡವರು. ಡಿ.8ರ ರಾತ್ರಿ 11 ಗಂಟೆ ಸುಮಾರಿಗೆ ಮಾನ್ಯತಾ ಟೆಕ್ ಪಾರ್ಕ್ ಬಳಿ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಕಾರ್ತಿಕ್ ಎಂಬಾತನನ್ನ ತಡೆದಿದ್ದ ಹೊಯ್ಸಳ ಸಿಬ್ಬಂದಿ, ಆಧಾರ್ ಕಾರ್ಡ್ ಸೇರಿದಂತೆ ಐಡೆಂಟಿಟಿ ದಾಖಲೆಗಳನ್ನ ಪರಿಶೀಲಿಸಿದ್ದರು.
'ಮನೆಯ ಸಮೀಪದಲ್ಲೇ ಇದ್ದೇವೆ, ಮೇಲಾಗಿ 11 ಗಂಟೆಯ ಸುಮಾರಿಗೆ ಓಡಾಟಕ್ಕೆ ನಿರ್ಬಂಧವಿದೆಯೇ?' ಎಂದು ಪ್ರಶ್ನಿಸಿದಾಗ, 3 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡುವುದಿಲ್ಲ ಎಂದಾಗ ಬೆದರಿಕೆ ಹಾಕಿ, 1 ಸಾವಿರ ರೂಗಳನ್ನ ಡಿಜಿಟಲ್ ಪೇಮೆಂಟ್ ಮೂಲಕ ಪಡೆದು ಸ್ಥಳದಿಂದ ತೆರಳಿದ್ದರು.
ಸೇವೆಯಿಂದ ವಜಾ:ಹೊಯ್ಸಳ ಸಿಬ್ಬಂದಿ ನಡೆ ಕುರಿತು ಟ್ವೀಟ್ ಮಾಡಿದ್ದ ಕಾರ್ತಿಕ್, ತಮಗಾದ ಅನುಭವ ಹಂಚಿಕೊಂಡಿದ್ದರು. ಬಳಿಕ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿ ಆದೇಶಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಇಲಾಖಾ ತನಿಖೆಗೆ ಆದೇಶಿಸಿದ್ದರು. ಇಬ್ಬರು ಸಿಬ್ಬಂದಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ:ಪೊಲೀಸರ ಹೆಸರಿನಲ್ಲಿ ಯುವಕ-ಯುವತಿಯನ್ನು ಸುಲಿಗೆ ಮಾಡಿದ್ದ ಹೋಮ್ ಗಾರ್ಡ್ ಬಂಧನ
ರಸ್ತೆಯಲ್ಲಿ ನಡೆದಾಡಿದ್ದಕ್ಕೆ ದಂಡ ಹಾಕಿದ್ದ ಸಿಬ್ಬಂದಿ: ತಮ್ಮ ಮನೆಯ ಹತ್ತಿರ ರಾತ್ರಿ ಹೊತ್ತಲ್ಲಿ ಸುತ್ತಾಡಿದ ಕಾರಣಕ್ಕೆ ದಂಪತಿಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಕಾನೂನು ಭಂಗ ಮಾಡಿದ್ದಕ್ಕಾಗಿ ದಂಪತಿಗೆ ಪೊಲೀಸರು 1000 ರೂಪಾಯಿ ದಂಡ ವಿಧಿಸಿದ್ದರು. ಕಾರ್ತಿಕ್ ಎಂಬ ಹೆಸರಿನ ವ್ಯಕ್ತಿಯು ತಮ್ಮ ಮೇಲಾದ ಅನ್ಯಾಯವನ್ನು ಹೇಳಿಕೊಂಡಿದ್ದು, ತಮಗೆ ಸಹಾಯ ಮಾಡುವಂತೆ ಟ್ವಿಟರ್ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸ್ ಇಲಾಖೆ, ಆರೋಪಕ್ಕೊಳಗಾದ ಇಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿತ್ತು.
ಟ್ವೀಟ್ ಮಾಡಿದ್ದ ಕಾರ್ತಿಕ್:ಡಿ.8ರ ಮಧ್ಯರಾತ್ರಿ ಸುಮಾರು 12:30 ಆಗಿತ್ತು. ನಾನು ಮತ್ತು ನನ್ನ ಹೆಂಡತಿ ಸ್ನೇಹಿತನ ಬರ್ತಡೇ ಪಾರ್ಟಿ ಸಮಾರಂಭದಲ್ಲಿ ಭಾಗವಹಿಸಿದ ನಂತರ ಮನೆಗೆ ಹಿಂತಿರುಗುತ್ತಿದ್ದೆವು. ತಾವು ತಮ್ಮ ಅಪಾರ್ಟಮೆಂಟ್ನ ಪ್ರವೇಶ ದ್ವಾರದಿಂದ ಕೆಲವೇ ಮೀಟರುಗಳ ಅಂತರದಲ್ಲಿರುವಾಗ ಅಲ್ಲಿಗೆ ಬಂದ ಪೊಲೀಸ್ ಗಸ್ತು ವಾಹನವೊಂದು ನಮ್ಮ ಬಳಿ ನಿಂತಿತು. ಅದರಿಂದ ಇಳಿದ ಪೊಲೀಸ್ ಯುನಿಫಾರ್ಮ್ನಲ್ಲಿದ್ದ ಇಬ್ಬರು ನಮಗೆ ನಮ್ಮ ಐಡಿ ಕಾರ್ಡ್ ತೋರಿಸುವಂತೆ ಕೇಳಿದರು.
ಆಗ ನಮಗೆ ಆಶ್ಚರ್ಯವಾಯಿತು. ಸಾಮಾನ್ಯ ದಿನವೊಂದರಲ್ಲಿ ರಸ್ತೆಯಲ್ಲಿ ಹೋಗುತ್ತಿರುವ ಪ್ರೌಢ ವಯಸ್ಕ ದಂಪತಿಯು ತಮ್ಮ ಐಡಿ ಕಾರ್ಡ್ ತೋರಿಸುವ ಅಗತ್ಯವಾದರೂ ಏನು? ಪೊಲೀಸರು ಪಿಂಕ್ ಹೊಯ್ಸಳ ವಾಹನದಲ್ಲಿ ಬಂದಿದ್ದರು. ಆಧಾರ್ ಕಾರ್ಡ್ ತೋರಿಸಿದ ನಂತರ ಅವರು ನಮ್ಮ ಫೋನ್ಗಳನ್ನು ಕಸಿದುಕೊಂಡರು ಮತ್ತು ವೈಯಕ್ತಿಕ ಮಾಹಿತಿಗಳನ್ನು ಕೇಳಲಾರಂಭಿಸಿದರು. ಸ್ವಲ್ಪ ಗಾಬರಿಯಾಗಿದ್ದರೂ ನಾವು ಅವರ ಪ್ರಶ್ನೆಗಳಿಗೆ ನಯವಾಗಿಯೇ ಉತ್ತರಿಸಿದೆವು. ಈ ಸಮಯದಲ್ಲಿ, ಅವರಲ್ಲಿ ಒಬ್ಬರು ಚಲನ್ ಪುಸ್ತಕದಂತೆ ಕಾಣುತ್ತಿದ್ದ ಪುಸ್ತಕವೊಂದನ್ನು ತೆಗೆದು ನಮ್ಮ ಹೆಸರು ಮತ್ತು ಆಧಾರ್ ಸಂಖ್ಯೆ ನಮೂದಿಸಲು ಪ್ರಾರಂಭಿಸಿದರು. ಏನೋ ತೊಂದರೆಯಾಗಲಿದೆ ಎಂದು ಗ್ರಹಿಸಿದ ನಾವು ಚಲನ್ ಅನ್ನು ಏಕೆ ನೀಡುತ್ತೀರಿ ಎಂದು ಕೇಳಿದೆವು.
ರಾತ್ರಿ 11 ರ ನಂತರ ರಸ್ತೆಯಲ್ಲಿ ಸುತ್ತಾಡದಂತೆ ಓರ್ವ ಪೊಲೀಸ್ ಈ ಸಂದರ್ಭದಲ್ಲಿ ನಮಗೆ ಸೂಚಿಸಿದರು. ಅಂಥ ಕಾನೂನಿನ ಬಗ್ಗೆ ನಮಗೆ ಗೊತ್ತಿರಲಿಲ್ಲ ಎಂದರೂ ಕೇಳದೆ ಪೊಲೀಸರು ನಮಗೆ 3 ಸಾವಿರ ರೂಪಾಯಿ ದಂಡ ಪಾವತಿಸುವಂತೆ ಕೇಳಿದ್ದಾರೆ. ನಮ್ಮನ್ನು ನಮ್ಮ ಪಾಡಿಗೆ ಬಿಟ್ಟು ಬಿಡುವಂತೆ ಗೋಗರೆದರೂ ಅವರು ಬಿಡಲಿಲ್ಲ. ನಾವು ಬೇಡಿಕೊಂಡಷ್ಟೂ ಅವರ ಕ್ರೂರತೆ ಹೆಚ್ಚಾಯಿತು ಎಂದು ಅವರು ಆರೋಪಿಸಿದ್ದರು. ಕೊನೆಗೆ ಕನಿಷ್ಠ ಮೊತ್ತವನ್ನಾದರೂ ಪಾವತಿಸುವಂತೆ ಪೊಲೀಸರು ಹೇಳಿದ್ದಾರೆ. ಕೊನೆಗೆ 1000 ರೂಪಾಯಿ ಕೊಡಲು ಒಪ್ಪಿದಾಗ ಅದರಲ್ಲೊಬ್ಬ ಪೊಲೀಸ್ ಕಾನ್ಸ್ಟೇಬಲ್ ತಮ್ಮ ಪೇಟಿಎಂ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿಕೊಂಡು 1000 ರೂಪಾಯಿ ಪಡೆದುಕೊಂಡಿದ್ದಾರೆ ಎಂದು ಕಾರ್ತಿಕ್ ಹೇಳಿಕೊಂಡಿದ್ದರು.
ಇದನ್ನೂ ಓದಿ:ರಾತ್ರಿ 11ರ ನಂತರ ರಸ್ತೆಯಲ್ಲಿ ನಡೆದಾಡಿದ್ದಕ್ಕೆ ದಂಡ.. ಬೆಂಗಳೂರು ಪೊಲೀಸರ ವಿರುದ್ಧ ದಂಪತಿ ಆರೋಪ