ಬೆಂಗಳೂರು: ರೈಸ್ ಪುಲ್ಲಿಂಗ್ ದಂಧೆಯಲ್ಲಿ ಜನರನ್ನು ವಂಚಿಸಿದ್ದ ಎಂಬ ಶಂಕಿತ ಆರೋಪಿಯಿಂದ 10 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಡಿ ಪುಲಿಕೇಶಿನಗರ ಠಾಣೆಯ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ನಸ್ರುಲ್ಲಾ, ಸನಾವುಲ್ಲಾ ಅಮಾನತುಗೊಂಡಿರುವ ಪೊಲೀಸ್ ಕಾನ್ಸ್ಟೇಬಲ್ಗಳು ಎಂದು ತಿಳಿದುಬಂದಿದೆ.
ಘಟನೆಯ ವಿವರ: ರೈಸ್ ಪುಲ್ಲಿಂಗ್ ದಂಧೆಯ ಶಂಕಿತ ಆರೋಪಿಯಾಗಿರುವ ಕೊಂಡಯ್ಯ ಎಂಬಾತನನ್ನು ಮಾರ್ಚ್ 20ರಂದು ವಶಕ್ಕೆ ಪಡೆದಿದ್ದ ಪುಲಿಕೇಶಿನಗರ ಠಾಣೆಯ ಪಿಎಸ್‌ಐ ಸೇರಿದಂತೆ ಮೂವರು ಸಿಬ್ಬಂದಿ, ಆತನನ್ನು ಅಕ್ರಮವಾಗಿ ಕೂಡಿ ಹಾಕಿ, ಕೇಸ್ ದಾಖಲಿಸುವುದಾಗಿ ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿದ್ದರು. ವಶಕ್ಕೆ ಪಡೆದಿದ್ದ ಪಿಎಸ್ಐ ರುಮಾನ್ ಪಾಶಾ ನೇತೃತ್ವದ ಸಿಬ್ಬಂದಿ ತಂಡ, ಠಾಣಾ ಡೈರಿಯಲ್ಲಿ ನಮೂದಿಸಿರಲಿಲ್ಲ. ಪ್ರಕರಣವನ್ನೂ ದಾಖಲಿಸಿರಲಿಲ್ಲ. ಬದಲಿಗೆ ಶಂಕಿತ ಆರೋಪಿ ಕೊಂಡಯ್ಯನನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಬೆದರಿಸಿ 10 ಲಕ್ಷ ರೂ. ಸುಲಿಗೆ ಮಾಡಿ ಬಿಟ್ಟು ಕಳಿಸಿದ್ದರು ಎಂದು ದೂರು ದಾಖಲಾಗಿತ್ತು. ಈ ಘಟನೆಯ ಕುರಿತು ಹೆಚ್ಚುವರಿ ಪೊಲೀಸ್ ಆಯುಕ್ತ ಐಜಿಪಿ ಚಂದ್ರಶೇಖರ್ ಅವರಿಗೆ ಕೊಂಡಯ್ಯ ದೂರು ನೀಡಿದ್ದರು.
ಈ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಐಜಿಪಿ ಆಂತರಿಕ ತನಿಖೆ ನಡೆಸುವಂತೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರಿಗೆ ಸೂಚಿಸಿದ್ದರು. ಪ್ರಾಥಮಿಕ ತನಿಖೆಯಲ್ಲಿ ಪಿಎಸ್‌ಐ ರುಮಾನ್ ಮತ್ತು ಸಿಬ್ಬಂದಿಯ ಕಳ್ಳಾಟ ಪತ್ತೆಯಾದ ಹಿನ್ನೆಲೆಯಲ್ಲಿ ಐಜಿಪಿಗೆ ವರದಿ ಸಲ್ಲಿಸಲಾಗಿತ್ತು. ವರದಿಯನ್ನು ಆಧರಿಸಿ ನಗರ ಪೊಲೀಸ್ ಆಯುಕ್ತ ಸಿ. ಹೆಚ್ ಪ್ರತಾಪ್ ರೆಡ್ಡಿ, ಆರೋಪಿತ ಪಿಎಸ್‌ಐ ಮತ್ತು ಓರ್ವ ಕಾನ್ಸ್ಸ್ಟೇಬಲ್ ಅವರನ್ನು ಅಮಾನತುಗೊಳಿಸಿದ್ದರು. ಸದ್ಯ ಇನ್ನಿಬ್ಬರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಿದ್ದಾರೆ.