ಬೆಂಗಳೂರು : ಕಂಪನಿಯೊಂದರಲ್ಲಿ ಬಾಡಿಗೆ ಪಡೆದು ನಕಲಿ ದಾಖಲೆ ಸೃಷ್ಟಿಸಿ ಹಳದಿ ಬೋರ್ಡ್ ಇದ್ದ ಕಾರುಗಳ ಬೋರ್ಡ್‌ಗಳನ್ನು ಬಿಳಿ ಬಣ್ಣದ ನಂಬರ್‌ಗಳಾಗಿ ಬದಲಾಯಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಓರೆಕ್ಸ್ ಆಟೋ ಇನ್ಟ್ರಾ ಸ್ಟಚರ್, ಸರ್ವೀಸ್ ಲಿ. ಕಂಪನಿಯ ಜನರಲ್ ಮ್ಯಾನೇಜರ್ ಮೋಹನ್ ವೇಲು ನೀಡಿದ ದೂರಿನ ಮೇರೆಗೆ ಆರೋಪಿಗಳಾದ ಗಿರೀಶ್ ಹಾಗೂ ಮೋಹನ್ ಎಂಬಿಬ್ಬರನ್ನ ಬಂಧಿಸಲಾಗಿದೆ. ಬಂಧಿತರಿಂದ 12 ಇನೋವಾ ಕ್ರಿಸ್ತಾ, ಮಾರುತಿ ಕಂಪನಿಯ-5, ಹೊಂಡೈ ಕಂಪನಿಯ-4, ಟೊಯೊಟಾ ಫಾರ್ಚುನರ್-3, ಹೋಂಡಾ ಕಂಪನಿಯ-1, ನಿಸಾನ್ ಕಂಪನಿಯ-1, ಟಾಟಾ ಕಂಪನಿಯ 1 ಕಾರು ಸೇರಿ 5.25 ಕೋಟಿ ರೂ. ಮೌಲ್ಯದ 27 ಕಾರುಗಳು, 3.70 ಲಕ್ಷ ರೂ.ಮೌಲ್ಯದ ಚಿನ್ನಾಭರಣ, ₹6.30 ಲಕ್ಷ ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ.
ಬೈಯಪ್ಪನಹಳ್ಳಿರುವ ಓರೆಕ್ಸ್ ಕಂಪೆನಿಯು ಖಾಸಗಿ ವ್ಯಕ್ತಿ ಹಾಗೂ ಕಂಪನಿಗಳಿಗೆ ಕಾರು ಬಾಡಿಗೆ ನೀಡುತ್ತದೆ. ಕಳೆದ ವರ್ಷ ಜು.8ರಂದು ಆರೋಪಿಗಳಾದ ಗಿರೀಶ್ ಹಾಗೂ ಮೋಹನ್ ಕಂಪನಿಯ ಕಚೇರಿಗೆ ಬಂದು ಒಂದು ಕಾರು ಬಾಡಿಗೆ ಪಡೆದಿದ್ದರು. ಕಾರು ಬಾಡಿಗೆ ವಿಚಾರವಾಗಿ ಕಂಪನಿಯೊಂದಿಗೆ ಕರಾರು ಪತ್ರ ಮಾಡಿಕೊಂಡಿದ್ದರು.
ನಂತರ ಬೇರೆ ಬೇರೆ ದಿನಗಳಲ್ಲಿ 20ಕ್ಕೂ ಹೆಚ್ಚು ಕಾರುಗಳನ್ನು ಬಾಡಿಗೆ ಪಡೆದಿದ್ದರು. ಕೆಲ ದಿನಗಳ ಬಳಿಕ ಕಾರುಗಳನ್ನು ವಾಪಸ್ ನೀಡಿರಲಿಲ್ಲ. ಹೀಗಾಗಿ, ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಾಗಿತ್ತು. ಗಂಭೀರತೆ ಅರಿತು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿದ್ದರು.
ಕಾರ್ಯಾಚರಣೆಗಿಳಿದು ಆರೋಪಿಗಳನ್ನು ಬಂಧಿಸಿ ಸಿಸಿಬಿ ವಿಚಾರಣೆ ನಡೆಸಿದಾಗ ಕಂಪನಿ ಗಮನಕ್ಕೆ ಬರದಂತೆ ನಕಲಿ ದಾಖಲೆ ಸೃಷ್ಟಿಸಿ ಬಾಡಿಗೆಗೆ ಪಡೆದಿದ್ದ ಹಳದಿ ಬೋರ್ಡ್ ಕಾರುಗಳನ್ನು ಬಿಳಿ ಬೋರ್ಡ್ ನಂಬರ್‌ಗೆ ಬದಲಾವಣೆ ಮಾಡುತ್ತಿದ್ದರು. ಇದಾದ ಬಳಿಕ ಕಡಿಮೆ ಬೆಲೆಗೆ ಹೊರ ರಾಜ್ಯದ ವ್ಯಕ್ತಿಗಳಿಗೆ ಮಾರಾಟ ಮಾಡಿದ್ದರು.
ಆರೋಪಿ ಮೋಹನ್ ಕಂಪನಿಯಿಂದ ಕಾರನ್ನು ಬಾಡಿಗೆಗೆ ಪಡೆದ್ರೆ, ಗಿರೀಶ್ ಗೌಡ ಅದನ್ನು ಮಾರಾಟ ಮಾಡಲು ಗಿರಾಕಿಗಳನ್ನು ಗೊತ್ತು ಪಡಿಸುತ್ತಿದ್ದ. ಇಷ್ಟೊಂದು ಹೊಸದಾದ ಇನ್ನೋವಾ ಕಾರುಗಳು ಅರ್ಧದಷ್ಟು ಕಡಿಮೆ ಬೆಲೆಗೆ ಸಿಗುತ್ತಿದ್ದ ಹಿನ್ನೆಲೆ ಹಲವು ಗ್ರಾಹಕರು ಆರೋಪಿಗಳಿಗೆ ಹಣ ಕೊಟ್ಟು ವಾಹನ ಖರೀದಿಸಿ ಪೇಚಿಗೆ ಸಿಲುಕಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:IMA ಹಗರಣ: ಠೇವಣಿ ವಾಪಸ್ ಕೋರಿ 65 ಸಾವಿರ ಅರ್ಜಿ- ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ