ಬೆಂಗಳೂರು: ಲೈಫ್ ಟೈಮ್ ರೋಡ್ ಟ್ಯಾಕ್ಸ್ ಕಟ್ಟಿರುವ, ಇನ್ಮುಂದೆ ಕಟ್ಟುವ ವಾಹನ ಮಾಲೀಕರು ಹುಷಾರಾಗಿರಬೇಕು. ಕಾರ್ ತಗೊಂಡು ಲಕ್ಷ ಟ್ಯಾಕ್ಸ್ ಪೇ ಮಾಡಿದರೂ ನಿಮ್ಮ ಮನೆಗೆ ನೋಟಿಸ್ ಬರಬಹುದು. ಕಟ್ಟಿರುವ ಟ್ಯಾಕ್ಸ್ ಸರ್ಕಾರದ ಬೊಕ್ಕಸಕ್ಕೆ ಸೇರದೆ ವಂಚಕರ ಜೇಬು ಸೇರುತ್ತಿತ್ತು. ಟ್ಯಾಕ್ಸ್ ಹೆಸರಿನಲ್ಲಿ ಹೆಚ್ಚುವರಿ ಹಣ ಪಡೆದು ನಕಲಿ ಬಿಲ್ ನೀಡುತ್ತಿದ್ದ ಆರ್‌ಟಿಒ ಸಿಬ್ಬಂದಿ(ಬಂಧಿತ) ಸೇರಿ ಮತ್ತೆ ಓರ್ವನನ್ನು ಬಂಧಿಸಲಾಗಿದೆ. ಮೂವರು ಪ್ರಕರಣದ ಆರೋಪಿಗಳು. ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರ ಪೈಕಿ ಓರ್ವ ಈ ಮೊದಲೇ ಬಂಧನವಾಗಿದ್ದ.
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆರ್‌ಟಿಒ ಅಧಿಕಾರಿಗಳ ಮೇಲಿನ ಪ್ರಕರಣ ಬಗೆದಷ್ಟು ಹೊರಬರುತ್ತಿದೆ. ಆರ್‌ಟಿಒ ನಕಲಿ ರಸೀದಿ ನೀಡಿ ದೊಡ್ಡ ಹಗರಣ ನಡೆಸಿರುವುದು ಬಯಲಾಗಿದೆ. ಮಲ್ಲೇಶ್ವರಂ ಬಳಿಕ ಕೋರಮಂಗಲದಲ್ಲಿ ವಂಚನೆ ಕುರಿತು ಎರಡು ಪ್ರಕಣ ದಾಖಲಾಗಿದ್ದವು. ಲೈಫ್ ಟೈಮ್ ಟ್ಯಾಕ್ಸ್ ಕಟ್ಟಿಸಿಕೊಳ್ಳುವ ಆರ್‌ಟಿಒ ಎಸ್ಡಿಎ ರವಿಶಂಕರ್ ಮತ್ತು ಸಂತೋಷ್ ಎಂಬ ಆರೋಪಿಗಳು ಜನರಿಗೆ ಯಾಮಾರಿಸಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ.