ಬೆಂಗಳೂರು :ಸಾವಿರಾರು ಅನಾಥ ಮಕ್ಕಳಿಗೆ ಶಿಕ್ಷಣ ಹಾಗೂ ವಸತಿ ಕಲ್ಪಿಸಲು ಹಣದ ಅಗತ್ಯವಿದೆ ಎಂದು ನಂಬಿಸಿ ಆನ್ಲೈನ್ ಮೂಲಕ ದಾನಿಗಳಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದ್ದ ನಕಲಿ ಮಕ್ಕಳ ಪಾಲನಾ ಕೇಂದ್ರದ ಮಾಲೀಕರಿಬ್ಬರನ್ನು ಸಿಸಿಬಿ ಪೊಲೀಸರು ಬೆಂಗಳೂರು ನಗರ ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದ ಸಹಕಾರದೊಂದಿಗೆ ಬಂಧಿಸಿದ್ದಾರೆ.
ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ರೂಪೇನಾ ಅಗ್ರಹಾರ ಬಳಿ ಆಕ್ಯೂಮೆಂಟ್ರಿಕ್ಸ್ ಹೆಸರಿನಲ್ಲಿ ಕಾಲ್ ಸೆಂಟರ್ ತೆರೆದು ಅನಾಥ ಮಕ್ಕಳಿಗೆ ಶಿಕ್ಷಣ, ವಸತಿಗೆ ನೆರವು ನೀಡುತ್ತಿರುವುದಾಗಿ ವಂಚಿಸುತ್ತಿದ್ದ ಅಜಯ್ ಹಾಗೂ ವೆಂಕಟಚಲಪತಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದು ವಂಚಿಸಿರುವುದು ಗೊತ್ತಾಗಿದೆ. ಈ ಬಗ್ಗೆ ಆರೋಪಿಗಳನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್.ಡಿ. ಶರಣಪ್ಪ ತಿಳಿಸಿದ್ದಾರೆ.
ಬಾಲ ನ್ಯಾಯ ಕಾಯ್ದೆಯ 2015 ಮಕ್ಕಳ ಪಾಲನಾ ಕೇಂದ್ರದಿಂದ ಅನುಮತಿ ಪಡೆಯದೆ ಅನಧಿಕೃತವಾಗಿ ಮಕ್ಕಳ ಭಾವಚಿತ್ರ ಬಳಸಿಕೊಂಡು ಚೈಲ್ಡ್ ವೇಲ್‌ಫೇರ್ ಫೌಂಡೇಷನ್ ಸೋಗಿನಲ್ಲಿ ಕಾಲ್‌ಸೆಂಟರ್ ತೆರೆದಿದ್ದರು. ಇದರಲ್ಲಿ 10 ಮಂದಿ ಕೆಲಸ ಮಾಡುತ್ತಿದ್ದು, ಸಾರ್ವಜನಿಕರಿಗೆ ಕರೆ ಮಾಡಿ ದಾನಿಗಳಿಂದ ಹಣ ಸಂಗ್ರಹಿಸಲು ಆರೋಪಿಗಳು ಸೂಚಿಸಿದ್ದರು. ದಿನಕ್ಕೆ 200 ಮಂದಿಗೆ ಫೋನ್ ಮಾಡಲು ಟಾರ್ಗೆಟ್ ನೀಡಿದ್ದ ಆರೋಪಿಗಳು ನಕಲಿ ಟ್ರಸ್ಟ್ ಹೆಸರಿನಲ್ಲಿ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಆನ್ಲೈನ್ ಮೂಲಕ ಹಣ ಸಂಗ್ರಹಿಸುತ್ತಿದ್ದರು. ಅಕ್ರಮದಿಂದ ಬಂದಿದ್ದ ಹಣವನ್ನು ಸ್ವಂತ ಬಳಕೆಗಾಗಿ ಉಪಯೋಗ ಮಾಡುತ್ತಿದ್ದರು. ಕಳೆದ ಐದು ವರ್ಷಗಳಿಂದ ವಂಚನೆ ಜಾಲದಲ್ಲಿ ತೊಡಗಿದ್ದ ಆರೋಪಿಗಳು ದಾನಿಗಳಿಂದ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರುವುದು ಮೆಲ್ನೋಟಕ್ಕೆ ತಿಳಿದುಬಂದಿದೆ.