ಬೆಂಗಳೂರು: ಫೇಕ್ ಗನ್ ತೋರಿಸಿ ಹಣ ವಸೂಲಿ ಮಾಡ್ತಿದ್ದ ಆರೋಪಿಗಳನ್ನ ಹೆಡೆಮುರಿ ಕಟ್ಟುವಲ್ಲಿ ಪಶ್ಚಿಮ ವಿಭಾಗದ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. ರವಿ ಹಾಗೂ ರಾಜು ಬಂಧಿತ ಆರೋಪಿಗಳು.
ಇದೇ ಡಿಸೆಂಬರ್ 2 ರಂದು ಖಾಸಗಿ ಕಂಪನಿಗೆ ಸೇರಿದ ಹಣವನ್ನು ಮಲ್ಲಿಕಾರ್ಜುನ ಎಂಬುವರು ಸಂಗ್ರಹಿಸಿಕೊಂಡು ಕೆಂಗೇರಿ ಉಪನಗರದಲ್ಲಿ ಮತ್ತೊಬ್ಬರಿಂದ ಹಣ ಕಟ್ಟಿಸಿಕೊಳ್ಳಲು ಬಂದಿದ್ದರು. ಈ ವೇಳೆ ಒಬ್ಬ ಅಪರಿಚಿತ ವ್ಯಕ್ತಿ ಗನ್ ತೋರಿಸಿ ಹಣ ಕಸಿದುಕೊಂಡಿದ್ದ. ಈ ಸಂಬಂಧ ಕೆಂಗೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನ ಬಂಧಿಸಿದ್ದಾರೆ.
ಫೇಕ್ ಗನ್ ತೋರಿಸಿ ಹಣ ವಸೂಲಿ ಆರೋಪಿಯನ್ನ ಬಂಧಿಸಿದಾಗ ಆರೋಪಿ ಲೈಟರ್ ಮಾದರಿಯ ಗನ್ ಹಿಡಿದು ಬೆದರಿಸಿರುವುದು ಬೆಳಕಿಗೆ ಬಂದಿದೆ. ಈ ಲೈಟರ್ ಮಾದರಿಯ ಗನ್ ಅನ್ನ ಫ್ಲಿಪ್ಕಾರ್ಟ್ನಲ್ಲಿ ಖರೀದಿ ಮಾಡಿದ್ದ ವಿಚಾರ ಕೂಡ ಬಾಯ್ಬಿಟ್ಟಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನ ಹೆಚ್ಚಿನ ವಿಚಾರಣೆ ಒಳಪಡಿಸಿದಾಗ, 2014ರಲ್ಲಿ ಈ ಇಬ್ಬರು ಆರೋಪಿಗಳು ಜಮೀನು ವಿಚಾರಕ್ಕೆ ನಡೆದ ಹೊಡೆದಾಟದಲ್ಲಿ ಭಾಗಿಯಾಗಿ ಜೈಲು ಸೇರಿ ಆಚೆ ಬಂದು ಮತ್ತೆ ಕೃತ್ಯ ಮುಂದುವರಿಸಿದ್ದಾರೆ. ಜೈಲಿನಿಂದ ಹೊರಬಂದವರ ಪೈಕಿ ರವಿ, ಅಕ್ಷಯ್ ಮೋಟಾರ್ನಲ್ಲಿ ಕೆಲಸ ಮಾಡ್ತಾ ಇದ್ದು, ಮತ್ತೋರ್ವ ಹೋಟೆಲ್ನಲ್ಲಿ ಕೆಲಸ ಮಾಡ್ತಿದ್ದಾನೆ. ಪ್ರಕರಣದಲ್ಲಿ ಮಲ್ಲಿಕಾರ್ಜುನ ಯಾವಾಗಲು ತಮ್ಮ ಬಳಿ ಹಣ ಸಂಗ್ರಹ ಮಾಡಿಕೊಳ್ಳುವುದನ್ನ ಒಂದು ತಿಂಗಳಿನಿಂದ ಗಮನಿಸಿದ್ದ ರವಿ, ರಾಜು ಜೊತೆ ಸೇರಿಕೊಂಡು ಕೃತ್ಯ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಗಳ ಬಳಿಯಿಂದ ಫೇಕ್ ಗನ್, ನಗದು ವಶಪಡಿಸಲಾಗಿದೆ.
ಅಂದ ಹಾಗೇ ಈ ಆರೋಪಿಗಳನ್ನು ಹಿಡಿಯಲು ಇನ್ಸ್ಪೆಕ್ಟರ್ ನೇತೃತ್ವದ ತಂಡ ಸುಮಾರು 51 ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದೆ.